ADVERTISEMENT

ಮುಂಬೈನ ಧಾರಾವಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ: 15 ಮಂದಿಗೆ ಗಾಯ, ಐವರು ಗಂಭೀರ

ಪಿಟಿಐ
Published 29 ಆಗಸ್ಟ್ 2021, 14:01 IST
Last Updated 29 ಆಗಸ್ಟ್ 2021, 14:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಭಾನುವಾರ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 15 ಜನರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಐದು ಜನರಲ್ಲಿ ಒಬ್ಬ ಎಂಟು ವರ್ಷದ ಬಾಲಕ ಮತ್ತು ಇಬ್ಬರು ಮಹಿಳೆಯರು ಇದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

ಮಧ್ಯಾಹ್ನ ಕೊಳಗೇರಿಯ ಶಾಹು ನಗರ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. 'ಒಂದು ಗುಡಿಸಲಿನ ಹೊರಗೆ ಇಟ್ಟಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ ಮತ್ತು ಇತರೆಡೆಗೆ ಬೆಂಕಿ ಆವರಿಸಿದೆ. ಘಟನೆಯಲ್ಲಿ 15 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ 3 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡ 15 ಜನರಲ್ಲಿ ಐದು ಜನರ ಪರಿಸ್ಥಿತಿ ಗಂಭೀರವಾಗಿದ್ದು, ಇಬ್ಬರು ಶೇ 50 ರಿಂದ 60ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಇನ್ನುಳಿದ ಏಳು ಜನ ಪುರುಷರು ಮತ್ತು ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ.

ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿತ್ತು ಮತ್ತು ಅದಕ್ಕಾಗಿಯೇ ಅದನ್ನು ಗುಡಿಸಲಿನಿಂದ ಹೊರಗಿಡಲಾಗಿತ್ತು ಎಂಬುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತನಿಖೆಯ ವೇಳೆ ಕಂಡುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.