
ಮುಂಬೈ ವಿಮಾನ ನಿಲ್ದಾಣ
(ಪಿಟಿಐ ಚಿತ್ರ)
ಮುಂಬೈ: ಕಳೆದೊಂದು ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
ನವೆಂಬರ್ 13ರಿಂದ 20ರ ನಡುವೆ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ.
ಮೊದಲ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಏಳು ಪ್ರತ್ಯೇಕ ಪ್ರಕರಣಗಳಲ್ಲಿ ₹25.318 ಕೋಟಿ ಮೌಲ್ಯದ 25.318 ಕೆ.ಜಿ ಹೈಡ್ರೊಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದರಲ್ಲದೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಮಗದೊಂದು ಕಾರ್ಯಾಚರಣೆಯಲ್ಲಿ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ₹26.981 ಕೋಟಿ ಮೌಲ್ಯದ 26.981 ಕೆ.ಜಿ ಹೈಡ್ರೊಪೋನಿಕ್ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಇದಲ್ಲದೆ ಚಿನ್ನ ಕಳ್ಳಸಾಗಣೆಗೆ ಯತ್ನಿಸಿದ್ದ ಪ್ರಕರಣದಲ್ಲಿ ನಾಲ್ವರು ಪ್ರಯಾಣಿಕರಿಂದ ₹65.57 ಲಕ್ಷ ಮೌಲ್ಯದ 24 ಕ್ಯಾರೆಟ್ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ₹54.13 ಲಕ್ಷ ಮೌಲ್ಯದ ವಜ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಿದೆ.
ಈ ಎಲ್ಲ ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.