ADVERTISEMENT

ಮುಂಬೈ:7ನೇ ದಿನಕ್ಕೆ ಕಾಲಿಟ್ಟ ಬೆಸ್ಟ್‌ ಸಿಬ್ಬಂದಿ ಮುಷ್ಕರ, ರಸ್ತೆಗಿಳಿಯದ ಬಸ್‌ಗಳು

ಏಜೆನ್ಸೀಸ್
Published 14 ಜನವರಿ 2019, 8:36 IST
Last Updated 14 ಜನವರಿ 2019, 8:36 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಮಹಾರಾಷ್ಟ್ರ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕ ಸಾರಿಗೆ ಸಂಸ್ಥೆ (ಬೆಸ್ಟ್‌) ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ.

ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್‌ ಅಂಡರ್‌ಟೇಕಿಂಗ್‌ (ಬಿಇಎಸ್‌ಟಿ) ಸಂಸ್ಥೆಯಲ್ಲಿ 32 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ಮುಂಗಡಪತ್ರವನ್ನು ಬಿಎಂಸಿ (ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಶನ್‌)ನೊಂದಿಗೆ ವಿಲೀನಗೊಳಿಸಬೇಕು, ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿದ್ದಾರೆ.

ಇದರಹಿನ್ನೆಲೆ3200 ಬಸ್‌ಗಳು ಸೋಮವಾರವೂ ರಸ್ತೆಗಿಳಿದಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ.

ADVERTISEMENT

ಸಂಸ್ಥೆಯಲ್ಲಿ 2,610 ಡ್ರೈವರ್‌ಗಳು ಹಾಗೂ 2,764 ಕಂಡಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಕೇವಲ ನಾಲ್ವರು ಡ್ರೈವರ್‌ಗಳು ಮಾತ್ರ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಮುಷ್ಕರ ಹಿನ್ನಲೆ ಒಂದು ಬಸ್‌ ಕೂಡ ರಸ್ತೆಗಿಳಿಯಲಿಲ್ಲ.

ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದ ಬೆಸ್ಟ್‌ ಆಡಳಿತ ಮಂಡಳಿ, ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಮುಷ್ಕರವನ್ನು ನಿರ್ಬಂಧಿಸಿತ್ತು. ಜೊತೆಗೆ, ಒಕ್ಕೂಟದ ಕಾರ್ಯಕರ್ತರೊಂದಿಗೆ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆ ಆಯುಕ್ತ, ‘ಬೆಸ್ಟ್‌’ನ ಪ್ರಧಾನ ವ್ಯವಸ್ಥಾಪಕರು, ಒಕ್ಕೂಟದ ಕಾರ್ಯಕರ್ತರು ಹಾಗೂ ನಗರ ಅಭಿವೃದ್ಧಿ ಕಾರ್ಯದರ್ಶಿಗಳ ನಡುವೆ ಶನಿವಾರ ನಡೆದ ಸಂಧಾನ ಸಭೆ ವಿಫಲವಾಗಿತ್ತು.

ನ್ಯಾಯಾಲಯದ ಆದೇಶವನ್ನು ಲೆಕ್ಕಿಸದ ಸಿಬ್ಬಂದಿ ಮುಷ್ಕರವನ್ನು ಮುಂದುವರಿಸಿದ್ದಾರೆ. ಇದರ ಹಿನ್ನೆಲೆ ಖಾಸಗಿ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.

ಏತನ್ಮಧ್ಯೆ, ‘ಮುಷ್ಕರಕ್ಕೆ ಮಹಾನಗರ ಪಾಲಿಕೆ(ಬಿಎಂಸಿ)ಯೇ ಪ್ರಮುಖ ಕಾರಣ’ ಎಂದು ಸಾರ್ವಜನಿಕ ಸಾರಿಗೆ ಹಾಗೂ ನಾಗರಿಕ ವೇದಿಕೆ ಅಮಿಚಿ ಮುಂಬೈನ ಸಂಚಾಲಕ ವಿದ್ಯಾಧರ್‌ ಡಾಟೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.