ADVERTISEMENT

ಇದೇನಾಯಿತು ಈ ನಗರಕ್ಕೆ?

​ಪ್ರಜಾವಾಣಿ ವಾರ್ತೆ
Published 16 ಮೇ 2020, 19:30 IST
Last Updated 16 ಮೇ 2020, 19:30 IST
ಜನರಿಲ್ಲದೆ ಬಿಕೋ ಎನ್ನುತ್ತಿರುವ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್
ಜನರಿಲ್ಲದೆ ಬಿಕೋ ಎನ್ನುತ್ತಿರುವ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್   

ವಲಸಿಗರ ನಗರ ಮುಂಬೈ. ಇದೊಂದು ಮಿನಿ ಇಂಡಿಯಾ. ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದವರೆಗೆ ಭಾರತದ ಎಲ್ಲಾ ರಾಜ್ಯಗಳಿಂದಲೂ ಬಂದ ಜನರು ತುಂಬಿ ತುಳುಕುತ್ತಿದ್ದ ನಗರವಿದು. ಈಗ ಬಹುತೇಕ ವಲಸಿಗರು ‘ಒಮ್ಮೆ ಇಲ್ಲಿಂದ ಹೊರಹೋದರೆ ಸಾಕು’ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಸಿಕ್ಕ ರೈಲು, ಕಾರು, ಟ್ರಕ್‌ಗಳನ್ನು ಹತ್ತಿಕೊಂಡು ಜನರು ಹುಟ್ಟಿದೂರಿನ ಕಡೆಗೆ ದೌಡಾಯಿಸುತ್ತಿದ್ದಾರೆ. ಅದೂ ಸಿಗದವರು ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ.

ಮುಂಬೈಯಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಏರುತ್ತಲೇ ಇದೆ. ಮಹಾಮಾರಿಯನ್ನು ನಿಯಂತ್ರಿಸಲು ‘ವಿಫಲ’ರಾದ ಮುಂಬೈ ಮಹಾನಗರ ಪಾಲಿಕೆಯ ಕಮಿಷನರ್ ಅವರನ್ನು ಸರ್ಕಾರ ಬದಲಿಸಿ ಬೇರೆಯವರನ್ನು ನೇಮಿಸಿದೆ. ಹೆಚ್ಚುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮೈದಾನದಲ್ಲಿ 1058 ಬೆಡ್‌ಗಳ, ದೇಶದ ಮೊತ್ತ ಮೊದಲ ಬಯಲು ಆಸ್ಪತ್ರೆಯನ್ನು (ಕೊರೊನಾ ಸ್ಪೆಷಲ್ ಆಸ್ಪತ್ರೆ) ತೆರೆಯಲಾಗಿದೆ. ದಿನದ 24 ತಾಸೂ ಗಡಿಯಾರದ ಮುಳ್ಳಿನಂತೆ ಓಡಾಡುತ್ತಿದ್ದ ಮುಂಬೈ ನಿವಾಸಿಗರು ಲಾಕ್‌ಡೌನ್‌ನಿಂದಾಗಿ ವ್ಯಾಪಾರ, ಉದ್ಯೋಗವಿಲ್ಲದೆ ರೋಸಿಹೋಗಿದ್ದಾರೆ. ಟಿ.ವಿ.ಯಲ್ಲಿ ಮುಂಬೈಯ ಕೊರೊನಾ ಸಾವು– ನೋವಿನ ಸುದ್ದಿ ನೋಡಿದರೆ ಈ ನಗರಕ್ಕೆ ಇನ್ನು ಭವಿಷ್ಯವೇ ಇಲ್ಲವೇನೋ ಅನ್ನಿಸುವಂತಿದೆ. ಅಷ್ಟೊಂದು ನಕಾರಾತ್ಮಕವಾಗಿ ನೋಡದಿದ್ದರೂ, ವಲಸಿಗರು ಬೆವರು ಬಸಿದು ಕಟ್ಟಿದ ಮುಂಬೈ ಮತ್ತೆ ಚೇತರಿಸಿಕೊಳ್ಳಲು ದೀರ್ಘ ಸಮಯ ಹಿಡಿಯುವುದು ನಿಶ್ಚಿತ. ವರ್ಷಾನುಗಟ್ಟಳೆ ಅನ್ನ, ವಸತಿ ನೀಡಿ ಸಾಕಿದ ಮುಂಬೈ ಮೇಲಿನ ಆಸೆಯನ್ನು ಸದ್ಯಕ್ಕಂತೂ ವಲಸಿಗರು ತೊರೆದಂತೆ ಕಾಣುತ್ತಿದೆ. ಮುಂಬೈ- ನಾಸಿಕ್ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರು ಈಗಲೂ ಕಿಕ್ಕಿರಿದಿದ್ದಾರೆ. ಸಿಕ್ಕ ಲಾರಿ, ಕಂಟೇನರ್, ಪಿಕಪ್ ವಾಹನ, ಸೈಕಲ್, ಕಾಲ್ನಡಿಗೆಯಲ್ಲಿಯೇ ತಮ್ಮ ರಾಜ್ಯಗಳಿಗೆ ಹೋಗುವ ತುರಾತುರಿಯಲ್ಲಿದ್ದಾರೆ.

ಸದ್ಯಕ್ಕೆ ಪ್ರತಿದಿನ ಆರೇಳು ರೈಲುಗಳು ಮುಂಬೈಯಿಂದ ಹೊರರಾಜ್ಯಗಳಿಗೆ ತೆರಳುತ್ತಿವೆ. ಹೈವೇಗಳಲ್ಲಿ ಓಡಾಡುವ ವಾಹನಗಳಲ್ಲಿ ಜಾನುವಾರುಗಳಂತೆ ಜನರನ್ನು ತುರುಕಿಸುತ್ತಿರುವ ದೃಶ್ಯಗಳು ಮನ ಕಲಕುವಂತಿವೆ. ವಾಹನಗಳಿಗೆ ನೀಡಲು ಹಣ ಇಲ್ಲದವರು ಕಾಲುಗಳನ್ನೇ ನಂಬಿ ನಡೆಯುತ್ತಿದ್ದಾರೆ. ಒಂದೊಂದು ಲಾರಿಯಲ್ಲಿ 50ರಿಂದ 70 ಜನರನ್ನು ತುಂಬುವುದು; ಒಂದೊಂದು ಟೆಂಪೋದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ! ‘ಇನ್ನು ಮುಂಬೈಯನ್ನು ನಂಬಿ ಪ್ರಯೋಜನವಿಲ್ಲ’ ಎಂದುಕೊಂಡವರು ಹೇಗಾದರೂ ಊರು ಸೇರುವ ತವಕದಲ್ಲಿದ್ದಾರೆ.

ADVERTISEMENT

ಮುಂಬೈಯಲ್ಲಿ ದೇಶದ ಎಲ್ಲಾ ಮಹಾನಗರಗಳಿಗಿಂತ ಹೆಚ್ಚು ಕೊರೊನಾ ಸಾವು– ನೋವುಗಳೇಕೆ ಸಂಭವಿಸುತ್ತಿವೆ? ಮುಂಬೈಯಲ್ಲಿ ಜನರು ಜೀವಿಸಲು ಹೆಚ್ಚು ಸ್ಥಳ ಇಲ್ಲ. ಜನಸಾಂದ್ರತೆ ಅತ್ಯಧಿಕ. ಸುಮಾರು 2 ಕೋಟಿ ಜನಸಂಖ್ಯೆ; ಪ್ರತಿ ಚದರ ಮೈಲಿಗೆ ಸರಾಸರಿ 73,000 ಜನ ವಾಸಿಸುತ್ತಿದ್ದಾರೆ. ಈ ಜನಸಾಂದ್ರತೆಯೇ ಕೊರೊನಾ ಕಾಲದಲ್ಲಿ ಮುಂಬೈಗೆ ಮಾರಣಾಂತಿಕವಾದದ್ದು.

‘ಒಂದು ವೇಳೆ ಸರ್ಕಾರ ಕಳೆದ ಮಾರ್ಚ್ 10ರಿಂದ 20ರ ನಡುವೆ ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದರೆ ಮುಂಬೈಯಲ್ಲಿ ಇಷ್ಟೊಂದು ವೇಗವಾಗಿ ಕೊರೊನಾ ಸೋಂಕು ಹಬ್ಬುತ್ತಿರಲಿಲ್ಲವೇನೋ? ಕೊಳೆಗೇರಿ ಪ್ರದೇಶಗಳು ಹೆಚ್ಚು ಇರುವುದರಿಂದ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗುತ್ತಿದೆ’ ಎಂದು ಸ್ವತಃ ಸಚಿವರೊಬ್ಬರೇ ಒಪ್ಪಿಕೊಂಡಿದ್ದಾರೆ.

ಈಗ ಮುಂಬೈಯ ಸುಪ್ರಸಿದ್ಧ ಮಹಾಲಕ್ಷ್ಮಿಯ ರೇಸ್ ಕೋರ್ಸ್, ವರ್ಲಿಯ ನೆಹರೂ ಸೆಂಟರ್, ನೆಹರೂ ಪ್ಲಾನಿಟೋರಿಯಂ ಎಲ್ಲವೂ ಕ್ವಾರಂಟೈನ್ ಕೇಂದ್ರಗಳಾಗಿವೆ. ಇಲ್ಲೆಲ್ಲ ರೋಗಿಗಳ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಹರಡಿದ್ದಾರೆ.

ಮುಂಬೈಯ ಜೀವನಾಡಿ ಲೋಕಲ್‌ ಟ್ರೈನ್‌. ಅದು ನಿಂತು 50 ದಿನಗಳೇ ಕಳೆದಿವೆ. 80 ಕಿ.ಮೀ.ನಷ್ಟು ಉದ್ದಕ್ಕೆ ಹಳಿಯಿರುವ, ಪ್ರತಿದಿನ 80 ಲಕ್ಷ ಜನರನ್ನು ಹೊತ್ತೊಯ್ಯುತ್ತಿದ್ದ ಲೋಕಲ್‌ ಟ್ರೈನ್‌ಗಳು ನಿಲ್ಲುವುದೆಂದರೆ ಮುಂಬೈ ಸ್ತಬ್ಧವಾದಂತೆಯೇ. ಅಂದರೆ ಮಹಾನಗರದ ಉಸಿರಾಟವೇ ನಿಂತಂತಿದೆ.

ಕೊರೊನಾ ವೈರಸ್‌ ದಾಳಿಯಿಂದ ಮುಂಬೈ ಪೊಲೀಸರೂ ಹೈರಾಣಾಗಿದ್ದಾರೆ. ಪೊಲೀಸರಿಗೂ ವೈರಸ್‌ ಹರಡುತ್ತಿದ್ದು ರಸ್ತೆಯಲ್ಲೀಗ ಅವರ ಸಂಖ್ಯೆಯೂ ವಿರಳವಾಗಿದೆ.

ಪೊಲೀಸರಿಗೆ ವಿಶ್ರಾಂತಿಯ‌ ಅಗತ್ಯವಿರುವುದರಿಂದ ಕೇಂದ್ರ ಮೀಸಲು ಪಡೆಯ ಪೊಲೀಸರನ್ನು ನೆರವಿಗೆ ಕೊಡಿ ಎಂದು ಸ್ವತಃ ಮುಖ್ಯಮಂತ್ರಿಯೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಏಷ್ಯಾದ ಅತಿದೊಡ್ಡ ಕೊಳೆಗೇರಿ ಎನ್ನಿಸಿಕೊಂಡಿದ್ದ ಧಾರಾವಿಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಭೀತಿ ಹುಟ್ಟಿಸಿದೆ.

ಜುಹೂ ಬೀಚ್‌ನಲ್ಲಿ ಕಡಲ ತೆರೆಗಳ ಸದ್ದಿಗೆ ಕಿವಿಕೊಡುವ ಜನಸಂದಣಿಯಿಲ್ಲ. ಭೇಲ್‌, ಪಾವ್‌ ಮಾರುವವರ ಸುಳಿವಿಲ್ಲ. ಕಡಲ ತೀರದ ಪಂಚತಾರಾ ಹೋಟೆಲ್‌ಗಳಲ್ಲೂ ಜೀವಕಳೆಯಿಲ್ಲ.1992-93ರ ಕೋಮುಗಲಭೆ ಮತ್ತು ಸರಣಿ ಬಾಂಬ್ ಸ್ಫೋಟದ ಘಟನೆಗಳ ನಂತರ ಮುಂಬೈಯಿಂದ ಅನೇಕ ರಾಜ್ಯಗಳ ಜನರು ತಮ್ಮ ಊರಿಗೆ ಪಲಾಯನ ಮಾಡಿದ್ದಿದೆ. ಆದರೆ, ಅಲ್ಲಿಂದೀಚೆಗೆ ಮತ್ತೊಂದು ಪೀಳಿಗೆ ಮರಳಿ ಮುಂಬೈಯತ್ತ ಮುಖ ಮಾಡುತ್ತಲೇ ಬಂದಿತ್ತು. ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕನ್ನಡ ಕರಾವಳಿಯ ಜನರೂ ಈಗ ವಿಷಣ್ಣರಾಗಿದ್ದಾರೆ. ಉದ್ಯೋಗ ನಷ್ಟ ಅವರನ್ನು ಅತಂತ್ರಕ್ಕೀಡುಮಾಡಿದೆ.

ವಿಶ್ವವಿಖ್ಯಾತ ಆಗ್ರಾದ ತಾಜಮಹಲ್‌ ಅನ್ನು ಹೊರತುಪಡಿಸಿದರೆ ಅತಿಹೆಚ್ಚು ಫೋಟೊಗಳನ್ನು ಕ್ಲಿಕ್ಕಿಸಿಕೊಂಡ ಖ್ಯಾತಿ ಮುಂಬೈಯ ವಿಕ್ಟೋರಿಯಾ ಟರ್ಮಿನಸ್ (ಸಿಎಸ್‌ಎಂಟಿ) ಕಟ್ಟಡದ್ದು. ಈಗ ಅಲ್ಲಿ ಫೋಟೊ ಕ್ಲಿಕ್ಕಿಸುವವರೇ ಇಲ್ಲ. ಸದಾ ಜನರಿಂದ ಗಿಜಿಗುಡುವ ವಿಟಿಯಲ್ಲಿ ನೀರವ ಮೌನ.ಗೇಟ್ ವೇ ಆಫ್ ಇಂಡಿಯಾದ ಎದುರು ಎಲಿಫೆಂಟಾ ಕೇವ್ಸ್‌ಗೆ ಹೋಗಲು ಬೋಟು ಕಾಯುವ ಪ್ರವಾಸಿಗರಿಲ್ಲ. ಮರೀನ್ ಲೈನ್‌ನ ಕ್ವೀನ್ಸ್ ನೆಕ್ಲೆಸ್ ತೀರದಲ್ಲಿ ಕೂರುತ್ತಿದ್ದ ಜನ ಕಣ್ಮರೆಯಾಗಿದ್ದಾರೆ. ಮಲಬಾರ್‌ ಹಿಲ್ಸ್‌, ಸಂಜಯ್‌ ಗಾಂಧಿ ನ್ಯಾಷನಲ್‌ ಪಾರ್ಕ್‌ನ ಪ್ರಾಣಿ, ಪಕ್ಷಿಗಳು ರಸ್ತೆಗಿಳಿದು ಸಂಭ್ರಮಿಸುತ್ತಿವೆ.

ಈ ಮಧ್ಯೆ ಮುಂಬೈಯಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ, ‘ಲಾಕ್‌ಡೌನ್‌ ಮುಗಿದ ಬಳಿಕವೂ ಕಚೇರಿಗೆ ಹೋಗಲು ಭಯವಾಗುತ್ತಿದೆ. ನಮಗೆ ಆರೋಗ್ಯ ಭದ್ರತೆ ಇದೆಯೆ?’ ಎಂದು ಶೇಕಡ 93ರಷ್ಟು ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಸದ್ಯದ– ಮುಂಬೈ ಮೇರೆ ಜಾನ್‌!

ಮುಂಬೈಯಲ್ಲಿ 24X7 ನೈಟ್‌ ಲೈಫ್‌ ಆರಂಭಿಸಲು ಜನವರಿಯಲ್ಲಿ ಸರ್ಕಾರ ನಿರ್ಧರಿಸಿತ್ತು. ಈಗ ನೈಟ್‌ ಲೈಫ್‌ ಬಿಡಿ; ಡೇ ಲೈಫ್‌ ಕೂಡಾ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.