
ಮುಂಬೈ: ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯ ಮತದಾನ ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರದಾದ್ಯಂತ 28,000ಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
227 ವಾರ್ಡ್‌ಗಳ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ(ಬಿಎಂಸಿ) ಬೆಳಿಗ್ಗೆ 7.30ಕ್ಕೆ ಮತದಾನ ಆರಂಭವಾಗಿದ್ದು, ವಿವಿಧ ಮತಗಟ್ಟೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.
ಸುರಕ್ಷಿತ ಮತ್ತು ಶಾಂತಿಯುತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಮತದಾನ ಕೇಂದ್ರಗಳಲ್ಲಿ ಪೊಲೀಸ್ ನಿಯೋಜನೆಯನ್ನು ಮುಂಚಿತವಾಗಿಯೇ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
10 ಹೆಚ್ಚುವರಿ ಆಯುಕ್ತರು, 33 ಉಪ ಆಯುಕ್ತರು ಮತ್ತು 84 ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ 25,000ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು, 3,000 ಅಧಿಕಾರಿಗಳನ್ನು ನಗರದ ವಿವಿಧ ಮತಗಟ್ಟೆಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಮುಂಬೈನ ಪ್ರತಿಯೊಬ್ಬ ನಿವಾಸಿ ತಮ್ಮ ಮನೆಗಳಿಂದ ಹೊರಬಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕೆಂದು ನಾನು ಮನವಿ ಮಾಡುತ್ತೇನೆ’ಎಂದು ಮುಂಬೈ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಬುಧವಾರ ರಾತ್ರಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ.
ಪೊಲೀಸರು ಮುನ್ನೆಚ್ಚರಿಕೆ ಆದೇಶಗಳನ್ನು ಹೊರಡಿಸಿದ್ದು, ಮತದಾನ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದ್ದಾರೆ. ರಾಜಕೀಯ ಪಕ್ಷಗಳ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಇತರ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ನಿಷೇಧಿಸಿದ್ದಾರೆ.
ಅಭ್ಯರ್ಥಿಯಲ್ಲದ ಯಾರಾದರೂ ಮತಗಟ್ಟೆಗಳಿಂದ 100 ಮೀಟರ್ ಒಳಗೆ ಓಡಾಡಲು ಅಥವಾ ಸಭೆ ಸೇರಲು ಅವಕಾಶವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.