ADVERTISEMENT

ಮುಂಬೈನಲ್ಲಿ ಭಾರೀ ಮಳೆ: IMD ರೆಡ್‌ ಅಲರ್ಟ್‌; ಶಾಲಾ ಕಾಲೇಜುಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 7:59 IST
Last Updated 18 ಆಗಸ್ಟ್ 2025, 7:59 IST
<div class="paragraphs"><p>ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ದ್ವಿಚಕ್ರ ವಾಹನ ಸವಾರರೊಬ್ಬರು ಜಲಾವೃತಗೊಂಡ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ</p></div>

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ದ್ವಿಚಕ್ರ ವಾಹನ ಸವಾರರೊಬ್ಬರು ಜಲಾವೃತಗೊಂಡ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ

   

ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಇದರ ಬೆನ್ನಲ್ಲೇ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ನಡೆಸಿರುವ ಪಾಲಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮುಂಬೈನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ನಡೆಸುವ ಮುನ್ನ ಒಂಬತ್ತು ವಿಮಾನಗಳು ಹಲವು ಸುತ್ತುಗಳನ್ನು ಹಾಕಿ ನಂತರ ಪ್ರಯಾಸದಿಂದ ಇಳಿದಿವೆ. ಒಂದು ವಿಮಾನವನ್ನು ಸೂರತ್‌ಗೆ ಮಾರ್ಗ ಬದಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಅಗತ್ಯ ಇಲ್ಲವೆಂದಾದರೆ ಮನೆಯಲ್ಲೇ ಇರಿ. ಮೀನುಗಾರರು ಕಡಲಿಗೆ ಇಳಿಯಬೇಡಿ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

'ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು ಹಲವು ರಸ್ತೆಗಳು ಜಲಾವೃತಗೊಂಡಿವೆ. ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ತಡವಾಗಿ ಸಂಚರಿಸುತ್ತಿರುವ ರೈಲು

ಮುಂಬೈ ಲೋಕಲ್‌ ರೈಲು 8ರಿಂದ 10 ನಿಮಿಷಗಳಷ್ಟು ವಿಳಂಬವಾಗಿ ಸಂಚರಿಸುತ್ತಿವೆ. ಆದರೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿಲ್ಲ ಎಂದಿದ್ದಾರೆ.

ಕೇಂದ್ರೀಯ ರೈಲ್ವೆಯ ಉಪನಗರ ರೈಲು ಸಂಚಾರದಲ್ಲೂ ಸಮಸ್ಯೆ ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ಹಳಿಗಳು ಮುಳುಗಿವೆ. ಕುರ್ಲ ಮತ್ತು ತಿಲಕ್‌ ನಗರ ನಿಲ್ದಾಣಗಳ ನಡುವೆ ಚಾರ್ಜಿಂಗ್ ಪಾಯಿಂಟ್‌ಗಳೇ ಗೋಚರಿಸದಂತಾಗಿದೆ ಎಂದು ವರದಿಯಾಗಿದೆ.

ಬೆಳಕಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಹೀಗಿದ್ದರೂ ಬಸ್ಸುಗಳು ತಮ್ಮ ನಿಗದಿತ ಮಾರ್ಗದಲ್ಲೇ ಸಂಚರಿಸುತ್ತಿವೆ. ಬೃಹತನ್‌ಮುಂಬೈ ವಿದ್ಯುತ್ ಪೂರೈಕೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಸೋಮವಾರ ಮತ್ತು ಮಂಗಳವಾರ ಮುಂಬೈ ಸುತ್ತಮುತ್ತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರೊಂದಿಗೆ ರತ್ನಗಿರಿ ಜಿಲ್ಲೆ, ಸಿಂಧುದುರ್ಗದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಿಪತ್ತು ನಿರ್ವಹಣೆಗೆ 1916 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 5.4 ಸೆಂ.ಮೀ. ಮಳೆಯಾಗಿದೆ. ಪೂರ್ವ ಭಾಗದಲ್ಲಿ 7.2 ಸೆಂ.ಮೀ., ಪಶ್ಚಿಮದಲ್ಲಿ 6.5 ಸೆಂ.ಮೀ. ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.