
ಮುಂಬೈ: ‘ಮುಂಬೈನಲ್ಲಿ ಶಿವಸೇನಾ (ಯುಬಿಟಿ) ಮೇಯರ್ ಪಟ್ಟಕ್ಕೇರಬೇಕು ಎನ್ನುವುದು ನನ್ನ ಕನಸು. ದೇವರು ಸಹಕಾರ ನೀಡಿದರೆ ಈ ಕನಸು ನನಸಾಗುತ್ತದೆ’ ಎಂದು ಶಿವಸೇನಾ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶನಿವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ‘ದೇವರು ಬಯಸಿದರೆ ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಪಟ್ಟವನ್ನು ಶಿವಸೇನಾ (ಯುಬಿಟಿ) ಅಲಂಕರಿಸಲಿದೆ’ ಎಂದರು.
ಬಿಎಂಸಿಯಲ್ಲಿ ತನ್ನ ಮೇಯರ್ ಹೊಂದಬೇಕು ಎಂಬ ಬಿಜೆಪಿಯ ದೀರ್ಘ ಕಾಲದ ಕನಸು ನನಸಾಗುವ ಗಳಿಗೆ ಕೂಡಿಬಂದಿರುವ ಬೆನ್ನಲ್ಲೇ, ಠಾಕ್ರೆ ಹೇಳಿಕೆಯು ಹೊಸ ಸಂಚಲನ ಸೃಷ್ಟಿಸಿದೆ. ಮುಂಬೈನ ಮೇಯರ್ ಬಿಜೆಪಿಯೊ ಅಥವಾ ಶಿವಸೇನಾ ಶಿಂದೆ ಬಣದ ಅಬ್ಯರ್ಥಿಯೋ ಎಂಬ ಚರ್ಚೆಯನ್ನೂ ಇದು ಮುನ್ನೆಲೆಗೆ ತಂದಿದೆ.
‘ಶಿವಸೇನಾವನ್ನು (ಯುಬಿಟಿ) ಮುಗಿಸಿಬಿಟ್ಟೆ ಎಂದು ಬಿಜೆಪಿ ಭಾವಿಸುತ್ತಿದೆ. ಆದರೆ, ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಶಿವಸೇನಾವನ್ನು ಮುಗಿಸಲು ಬಿಜೆಪಿ ಎಲ್ಲ ರೀತಿಯಿಂದ ಪ್ರಯತ್ನಿಸಿದರೂ, ‘ನಿಷ್ಠೆ’ಯನ್ನು ಖರೀದಿಸಲು ಆಗಿಲ್ಲ’ ಎಂದು ಠಾಕ್ರೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿಯವರು ಮುಂಬೈಯನ್ನು ಒತ್ತೆ ಇಟ್ಟು ದ್ರೋಹದ ಮೂಲಕ ಗೆಲುವು ಗಳಿಸಿದ್ದಾರೆ. ಮರಾಠಿಗರು ಈ ಪಾಪವನ್ನು ಎಂದೂ ಕ್ಷಮಿಸುವುದಿಲ್ಲ. ಯುದ್ಧ ಮುಗಿದಿಲ್ಲ, ಈಗಷ್ಟೇ ಆರಂಭವಾಗಿದೆ’ ಎಂದು ಅವರು ಹೇಳಿದರು. ದೇಶದ್ರೋಹಿಗಳು (ಬಿಜೆಪಿ–ಏಕನಾಥ ಶಿಂದೆ) ತಾವು ಎಂಥ ಪಾಪ ಮಾಡಿದ್ದೇವೆ ಎನ್ನುವುದನ್ನು ಯೋಚಿಸಬೇಕು’ ಎಂದು ಠಾಕ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನನ್ನದು ಸೋತವನ ಮನಸ್ಥಿತಿ ಅಲ್ಲ. ನಾವು ಅವರಿಗೆ ತಕ್ಕ ಉತ್ತರ ನೀಡಿದ್ದೇವೆ’ ಎಂದ ಠಾಕ್ರೆ, ‘ಮುಂಬೈ ಅನ್ನು ಹೇಗೆ ಲೂಟಿ ಮಾಡಲಾಯಿತು ಎನ್ನುವುದನ್ನು ಮುಂದೆ ಶಿವಸೇನಾ (ಯುಬಿಟಿ) ಎಂಎನ್‌ಎಸ್ ಮತ್ತು ಎನ್‌ಸಿಪಿ (ಎಸ್‌ಪಿ) ಕಾರ್ಪೊರೇಟರ್‌ಗಳು ಬಹಿರಂಗಪಡಿಸಲಿದ್ದಾರೆ ಎಂದರು.
ಒಟ್ಟು 227 ಸದಸ್ಯ ಬಲದ ಬಿಎಂಸಿಯಲ್ಲಿ ಶಿವಸೇನಾ ಶಿಂದೆ ಬಣ 29 ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನಾ ಯುಬಿಟಿ 65 ಸ್ಥಾನಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.