ADVERTISEMENT

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣ: ಟೊರೆಸ್ ಜ್ಯುವೆಲ್ಲರಿ ಕಂಪನಿ ಸಿಇಒ ಬಂಧನ

ಪಿಟಿಐ
Published 28 ಜನವರಿ 2025, 3:08 IST
Last Updated 28 ಜನವರಿ 2025, 3:08 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮುಂಬೈ: ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಟೊರೆಸ್ ಜ್ಯುವೆಲ್ಲರಿ ಕಂಪನಿಯ ಸಿಇಒ ತೌಸಿಫ್ ರಿಯಾಜ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಣಕಾಸು ವಂಚನೆ ಪ್ರಕರಣ ದಾಖಲಾಗಿದ್ದರಿಂದ ಜಾನ್ ಕಾರ್ಟರ್ ಎಂದು ಕರೆಯಲ್ಪಡುವ ತೌಸಿಫ್ ರಿಯಾಜ್ ತಲೆಮರೆಸಿಕೊಂಡಿದ್ದ. ಆತನಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಮುಂಬೈನ ಲೋನಾವಾಲಾದ ಹೋಟೆಲ್​ನಲ್ಲಿ ತೌಸಿಫ್ ರಿಯಾಜ್‌ನನ್ನು ಬಂಧಿಸುವಲ್ಲಿ ಮುಂಬೈ ಪೊಲೀಸ್​ನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ತೌಸಿಫ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೌಸಿಫ್‌ನನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಆತನನ್ನು ಫೆಬ್ರುವರಿ 3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಂಬೈನ ದಾದರ್‌ನಲ್ಲಿರುವ ಟೊರೆಸ್ ಜ್ಯುವೆಲ್ಲರಿ ಕಂಪನಿಯು ಪೊಂಜಿ ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ (ಎಂಎಲ್‌ಎಂ) ಯೋಜನೆಗಳ ಮೂಲಕ ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿರುವ ಆರೋಪ ಕೇಳಿಬಂದಿದೆ. ಕಂಪನಿ ವಿರುದ್ಧ 3,700ಕ್ಕೂ ಹೆಚ್ಚು ಹೂಡಿಕೆದಾರರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಟೊರೆಸ್ ಜ್ಯುವೆಲ್ಲರಿ ಕಂಪನಿಯ ಅಧಿಕಾರಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.