ಮುಂಬೈ: ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜನರು ಗುಂಪಾಗಿ ವಿದೇಶ ಅಥವಾ ದೇಶದೊಳಗಡೆ ಪ್ರವಾಸ ಕೈಗೊಳ್ಳುವುದಕ್ಕೆ ಮುಂಬೈ ಪೊಲೀಸರು ನಿರ್ಬಂಧ ಹೇರಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಖಾಸಗಿ ಟೂರ್ ಆಪರೇಟರ್ ಸೇರಿದಂತೆ ಎಲ್ಲ ಪ್ರವಾಸಗಳು (ಅಗತ್ಯ ಪ್ರವಾಸಗಳನ್ನು ಹೊರತುಪಡಿಸಿ) ಕೈಗೊಳ್ಳುವಮುನ್ನ ಪೊಲೀಸ್ ಆಯುಕ್ತರ ಅನುಮತಿಪಡೆಯಬೇಕು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 31ಕ್ಕೆ ಏರಿದ್ದು, ಜನರು ಕೈ ಕುಲುಕಿ ಸ್ವಾಗತಿಸುವ ಬದಲು ಕೈಮುಗಿದು ಸ್ವಾಗತಿಸಿ ಎಂದು ಮುಂಬೈ ಪೊಲೀಸ್ ಉಪ ಆಯುಕ್ತ ಪ್ರಣಯ್ ಅಶೋಕ್ ಹೇಳಿದ್ದರು.
ಪೊಲೀಸರೆಲ್ಲರೂ ಮಾಸ್ಕ್ ಬಳಸುತ್ತಿದ್ದು, ಸರ್ಕಾರ ನೀಡಿದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದೆ.
ಕೊರೊನಾ ವೈರಸ್‌ನಿಂದ ತಪ್ಪಿಸಲು ನಗು ಮತ್ತು ಕೈ ಮುಗಿಯುವುದು ಸೂಕ್ತ ಮಾರ್ಗ ಎಂದು ಮುಂಬೈ ಪೊಲೀಸರು ಟ್ವೀಟಿಸಿದ್ದರು.
ಪ್ರಿಯ ಮುಂಬೈ ನಿವಾಸಿಗಳೇ, ತಾಳ್ಮೆಯಿಂದ ಇದ್ದು ಕೆಲವೊಂದು ಪ್ರಮುಖವಾದ ವಿಷಯಗಳನ್ನು ಪಾಲಿಸಬೇಕು. ವೈಯಕ್ತಿಕವಾಗಿ ಕಚೇರಿಯಲ್ಲಿ ಮತ್ತು ಮನೆಯಲ್ಲಿ ಶುಚಿತ್ವ ಕಾಪಾಡಿ. ಗುಂಪು ಸೇರುವುದನ್ನು, ಅನಗತ್ಯ ಪ್ರವಾಸಗಳನ್ನು ನಿಲ್ಲಿಸಿ. ಸುಳ್ಳು ಸುದ್ದಿಗಳನ್ನು ದೂರವಿರಿಸಿ, ವೈದ್ಯರನ್ನು ಹತ್ತಿರದಲ್ಲಿರಿಸಿ. ಹೆದರಬೇಡಿ, ಜಾಗೃತರಾಗಿರಿ. ನಾವು ಈ ವಿಪತ್ತನ್ನು ನಾವು ಎದುರಿಸಬಲ್ಲೆವು ಎಂದು ಮುಂಬೈ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.