ಬಂಧನ
(ಪ್ರಾತಿನಿಧಿಕ ಚಿತ್ರ)
ಮುಂಬೈ: ರಾಸಾಯನಿಕ ಕಂಪನಿಯ ಹೆಸರಿನಲ್ಲಿ ಮಾದಕವಸ್ತು ತಯಾರಿಕೆಯಲ್ಲಿ ತೊಡಗಿದ್ದ ತೆಲಂಗಾಣದ 12 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
‘ಮಾದಕವಸ್ತು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯಲ್ಲಿ ಸುಮಾರು ₹12 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ತಯಾರಿಕೆ ಮಾಡಬಹುದಿತ್ತು’ ಎಂದು ಪೊಲೀಸರು ಹೇಳಿದರು.
ಮಾದಕವಸ್ತುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಇದು ಇಲ್ಲಿಯವರೆಗಿನ ಅತ್ಯಂತ ದೊಡ್ಡ ಪ್ರಕರಣ ಎನ್ನಲಾಗುತ್ತಿದೆ. ಮುಂಬೈನ ಮಾದಕವಸ್ತು ನಿಯಂತ್ರಣ ಘಟಕವು ಈ ಕಾರ್ಯಾಚರಣೆಯನ್ನು ನಡೆಸಿದೆ. ಕಳೆದ ಹಲವು ವರ್ಷಗಳಿಂದ ಈ ಘಟಕದಲ್ಲಿ ನೂರಾರು ಕೆ.ಜಿ ‘ಮೆಫೆಡ್ರೋನ್’ ಎಂಬ ಮಾದಕವಸ್ತುವನ್ನು ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಮೆಫೆಡ್ರೋನ್ ಅನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ– ಡ್ರೋನ್, ಎಂ–ಕ್ಯಾಟ್, ವೈಟ್ ಮ್ಯಾಜಿಕ್, ಮಿಯಾಂವ್ ಮಿಯಾಂವ್ ಮತ್ತು ಬಬಲ್ ಎಂದು ಕರೆಯಲಾಗುತ್ತದೆ. ಮೆಫೆಡ್ರೋನ್‌ಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ.
ಬಾಂಗ್ಲಾದೇಶದ ಮಹಿಳೆ ಫಾತಿಮಾ ಮುರಾದ್ ಶೇಷ್ (23) ಎಂಬುವರನ್ನು ಮುಂಬೈನಲ್ಲಿ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಬಳಿಕ ಆಗಸ್ಟ್ 8ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಫಾತಿಮಾ ಅವರಿಂದ 105 ಗ್ರಾಂ.ನಷ್ಟು ಮೆಫೆಡ್ರೋನ್ ಮತ್ತು ₹23.97 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.