ADVERTISEMENT

ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಹತ್ಯೆ

ಪಿಟಿಐ
Published 30 ಅಕ್ಟೋಬರ್ 2025, 14:42 IST
Last Updated 30 ಅಕ್ಟೋಬರ್ 2025, 14:42 IST
   

ಮುಂಬೈ: ಮುಂಬೈನಲ್ಲಿ ವ್ಯಕ್ತಿಯೊಬ್ಬ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಪ್ರಹಸನಕ್ಕೆ ತೆರೆಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡಿನೇಟಿಗೆ ಬಲಿಯಾಗಿದ್ದಾನೆ. ಮೃತನನ್ನು ರೋಹಿತ್ ಆರ್ಯ(50) ಎಂದು ಗುರುತಿಸಲಾಗಿದೆ.

ಒಂದು ಗಂಟೆ ನಡೆದ ಪ್ರಹಸನದಲ್ಲಿ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ರೋಹಿತ್ ಆರ್ಯ, ಒಂದು ವಿಡಿಯೊ ಬಿಡುಗಡೆ ಮಾಡಿದ್ದ. ಅದರಲ್ಲಿ ತಾನು ಕೆಲವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು ಎಂದು ಹೇಳಿದ್ದ. ಬಳಿಕ, ಪೊಲೀಸರ ಗುಂಡು ತಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

‘ಮಧ್ಯಾಹ್ನ 1.30ರ ಸುಮಾರಿಗೆ ಮಹಾವೀರ್ ಕ್ಲಾಸಿಕ್ ಕಟ್ಟಡದಲ್ಲಿ ವ್ಯಕ್ತಿಯೊಬ್ಬ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾನೆ ಎಂದು ಮುಂಬೈನ ಪೊವಾಯಿ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಈ ಸಂಬಂಧ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ ಮುಂಬೈ ಪೊಲೀಸರ ತಂಡ ಮಕ್ಕಳನ್ನು ಯಾವುದೇ ತೊಂದರೆ ಇಲ್ಲದಂತೆ ಬಿಡುಗಡೆ ಮಾಡಿದೆ. ಕಾರ್ಯಾಚರಣೆ ವೇಳೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ಘೋಷಿಸಿದರು’ಎಂದು ಡಿಸಿಪಿ ದತ್ತಾ ನಲವಾಡೆ ಹೇಳಿದ್ದಾರೆ.

ADVERTISEMENT

ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ್ ತಿಳಿಸಿದ್ದಾರೆ.

ಸುಮಾರು 15 ವರ್ಷದ ಮಕ್ಕಳನ್ನು ವೆಬ್ ಸೀರಿಸ್‌ವೊಂದರ ಆಡಿಶನ್‌ಗೆಂದು ಕರೆಸಿದ್ದ ಆರ್ಯ, ಒತ್ತೆಯಾಳಾಗಿರಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಏರ್ ಗನ್ ಜೊತೆಗೆ ಆತ ಕೆಲವು ಕೆಮಿಕಲ್ಸ್ ಸಹ ಇಟ್ಟುಕೊಂಡಿದ್ದ. ಕಾರ್ಯಾಚರಣೆ ವೇಳೆ ಶೂಟೌಟ್ ಬಗ್ಗೆ ಪೊಲೀಸರು ಆರಂಭದಲ್ಲಿ ಮಾಹಿತಿ ನೀಡಿರಲಿಲ್ಲ. ಸಂಜೆ 5.15ಕ್ಕೆ ಆರ್ಯ ಮೃತಪಟ್ಟಿರುವುದಾಗಿ ಪೊಲೀಸರು ಘೋಷಿಸಿದರು.

ಮಹಾವೀರ್ ಕ್ಲಾಸಿಕ್ ಕಟ್ಟಡದ ಆರ್‌.ಎ. ಸ್ಟುಡಿಯೊದಲ್ಲಿ ವ್ಯಕ್ತಿಯೊಬ್ಬ ಮಕ್ಕಳನ್ನು ಹಿಡಿದಿಟ್ಟುಕೊಂಡಿದ್ದಾನೆ ಎಂಬ ಮಾಹಿತಿ ಬರುತ್ತಿದ್ದಂತೆ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಅಗ್ನಿಸಾಮಕ ದಳದ ಜೊತೆ ಸ್ಥಳಕ್ಕೆ ದೌಡಾಯಿಸಿದ್ದರು.

ಪೊಲೀಸರು ಕಟ್ಟಡ ಪ್ರವೇಶಿಸಲುವ ಮೊದಲೇ ರೋಹಿತ್ ಆರ್ಯ ಒಂದು ವಿಡಿಯೊ ಬಿಡುಗಡೆ ಮಾಡಿದ್ದ. ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

‘ನನ್ನ ಹೆಸರು ರೋಹಿತ್ ಆರ್ಯ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಳ್ಳುವ ಯೋಜನೆ ಮಾಡಿದೆ. ನಾನು ಕೆಲ ಸರಳ ಬೇಡಿಕೆ ಹೊಂದಿದ್ದೇನೆ. ಅತ್ಯಂತ ನೀತಿಯಿಂದ ಕೂಡಿದ ಬೇಡಿಕೆಗಳವು. ನಾನು ಕೆಲವರಿಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಿದೆ. ಉತ್ತರಕ್ಕೆ ಪ್ರತಿ ಪ್ರಶ್ನೆಗಳಿವೆಯೇ ಎಂದೂ ಅವರನ್ನು ಕೇಳಬೇಕಿದೆ. ನನಗೆ ಉತ್ತರ ಬೇಕು. ಅದು ಬಿಟ್ಟರೆ ನನಗೆ ಬೇರೇನೂ ಬೇಕಿಲ್ಲ. ನಾನು ಭಯೋತ್ಪಾದಕನಲ್ಲ. ನಾನು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಸರಳ ಸಂಭಾಷಣೆ ನಡೆಸಲು ಬಯಸುತ್ತಿದ್ದೇನೆ’ಎಂದು ವಿಡಿಯೊದಲ್ಲಿ ರೋಹಿತ್ ಆರ್ಯ ಹೇಳಿದ್ದ.

'ನಿಮ್ಮ ಕಡೆಯಿಂದ ಆಗುವ ಸಣ್ಣದೊಂದು ತಪ್ಪು ನಡೆಯೂ ಸಹ ನಾನು ಈ ಇಡೀ ಸ್ಥಳಕ್ಕೆ ಬೆಂಕಿ ಹಚ್ಚುವಂತೆ ಮಾಡಬಹುದು....ನಾನು ಸತ್ತರೂ ಮಕ್ಕಳಿಗೆ ಅನಗತ್ಯವಾಗಿ ಘಾಸಿಯಾಗುತ್ತದೆ. ನನ್ನನ್ನು ಹೊಣೆಗಾರರನ್ನಾಗಿ ಮಾಡಬೇಡಿ’ಎಂದು ಹೇಳಿದ್ದ.

ನಾನು ಕೆಲವರ ಜೊತೆ ಸಂಭಾಷಣೆ ನಡೆಸಿದ ನಂತರ, ಮಕ್ಕಳು ಕೋಣೆಯಿಂದ ಹೊರಬರುತ್ತಾರೆ ಎಂದಿದ್ದ. ಪೊಲೀಸರು ಆತನ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ, ಬಾತ್‌ರೂಮ್ ಮೂಲಕ ಕಟ್ಟಡಕ್ಕೆ ಪ್ರವೇಶಿಸಿದ ಪೊಲೀಸರು, ಮಕ್ಕಳನ್ನು ರಕ್ಷಿಸುವ ಜೊತೆಗೆ ಆರೋಪಿಗೆ ಗುಂಡಿಕ್ಕಿದರು ಎಂದು ಡಿಸಿಪಿ ನಲವಾಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.