ADVERTISEMENT

ಮುಂಬೈ | ಒತ್ತೆ ಇದ್ದ 17 ಮಕ್ಕಳ ರಕ್ಷಣೆ: ಆರೋಪಿ ಹತ್ಯೆ

ಮೃತ್ಯುಂಜಯ ಬೋಸ್
Published 30 ಅಕ್ಟೋಬರ್ 2025, 11:34 IST
Last Updated 30 ಅಕ್ಟೋಬರ್ 2025, 11:34 IST
-
-   

ಮುಂಬೈ: ಮುಂಬೈನ ಪವಾಯಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ವೆಬ್‌ ಸರಣಿಗಾಗಿ ಆಡಿಷನ್ ನಡೆಸುವುದಾಗಿ ಹೇಳಿ ಒತ್ತೆಯಾಗಿ ಇಟ್ಟುಕೊಂಡಿದ್ದ, 17 ಮಕ್ಕಳು ಸೇರಿ 19 ಜನರನ್ನು ಪೊಲೀಸರು ಗುರುವಾರ ರಕ್ಷಿಸಿದ್ದಾರೆ.

ಒತ್ತೆಯಾಳುಗಳ ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿ, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರೋಹಿತ್‌ ಆರ್ಯ(50), ಪೊಲೀಸರ ಗುಂಡು ತಾಗಿ ಮೃತಪಟ್ಟ ವ್ಯಕ್ತಿ. ರಕ್ಷಿಸಿದವರಲ್ಲಿ ಒಬ್ಬ ಹಿರಿಯ ನಾಗರಿಕರೂ ಇದ್ದಾರೆ.

‘ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ’ ಎಂದು ಜಂಟಿ ಪೊಲೀಸ್‌ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣನ್ ಹೇಳಿದ್ದಾರೆ.

ADVERTISEMENT

ವೆಬ್‌ ಸರಣಿಗಾಗಿ ರೋಹಿತ್‌ ಆರ್ಯ ಕೈಗೊಂಡಿದ್ದ ಆಡಿಷನ್‌ನಲ್ಲಿ 15 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರು ಪಾಲ್ಗೊಂಡಿದ್ದರು. ಕಳೆದ ಎರಡು ದಿನಗಳಿಂದ ಆಡಿಷನ್‌ ನಡೆಯುತ್ತಿತ್ತು.

‘ಮಧ್ಯಾಹ್ನ 1.30ರ ವೇಳೆಗೆ, ಮಹಾವೀರ್‌ ಕ್ಲಾಸಿಕ್ ಕಟ್ಟಡದಲ್ಲಿರುವ ಆರ್‌.ಎ.ಸ್ಟುಡಿಯೊದಲ್ಲಿ ಒಬ್ಬ ವ್ಯಕ್ತಿ 17 ಮಕ್ಕಳನ್ನು ಒತ್ತೆಯಾಗಿಟ್ಟುಕೊಂಡಿದ್ದಾನೆ ಎಂಬ ಮಾಹಿತಿಯನ್ನು ಪವಾಯಿ ಪೊಲೀಸ್‌ ಠಾಣೆಗೆ ನೀಡಲಾಯಿತು. ತಕ್ಷಣವೇ ಪೊಲೀಸರು, ಕ್ಷಿಪ್ರ ಸ್ಪಂದನೆ ತಂಡ(ಕ್ಯೂಆರ್‌ಟಿ), ಬಾಂಬ್‌ ಪತ್ತೆ ಹಾಗೂ ನಿಷ್ಕ್ರಿಯ ದಳದೊಂದಿಗೆ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದರು’ ಎಂದು ಡಿಸಿಪಿ ದತ್ತ ವಲವಡೆ ಹೇಳಿದರು.

ಪೊಲೀಸರು ಮಹಾವೀರ ಕ್ಲಾಸಿಕ್ ಕಟ್ಟಡ ತಲುಪುವುದಕ್ಕೂ ಮುನ್ನ, ರೋಹಿತ್‌ ಬಿಡುಗಡೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತಂಕ ಸೃಷ್ಟಿಸಿತ್ತು.

‘ನಾನು ಕೆಲ ಜನರಿಗೆ ಪ್ರಶ್ನೆಗಳನ್ನು ಕೇಳಬೇಕಿದೆ’ ಎಂಬ ಹೇಳಿಕೆ ಇದ್ದ ವಿಡಿಯೊಯೊಂದನ್ನು ರೋಹಿತ್‌ ಬಿಡುಗಡೆ ಮಾಡಿದ್ದ.

‘ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಯೋಜನೆಯೊಂದನ್ನು ರೂಪಿಸಿರುವೆ. ಅದರಂತೆ, ಕೆಲ ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದೇನೆ. ನನ್ನ ಬೇಡಿಕೆಗಳು ಬಹಳ ಸರಳವಾಗಿದ್ದು, ಕೆಲ ಪ್ರಶ್ನೆಗಳನ್ಣೂ ಕೇಳಬೇಕಾಗಿದೆ ಎಂದು ರೋಹಿತ್‌ ಹೇಳಿರುವುದು ವಿಡಿಯೊದಲ್ಲಿತ್ತು’ ಎಂದು ನಲವಡೆ ಹೇಳಿದರು.

‘ನಾನು ಭಯೋತ್ಪಾದಕ ಅಲ್ಲ. ನಾನು ಹಣಕ್ಕಾಗಿಯೂ ಬೇಡಿಕೆ ಇಡುತ್ತಿಲ್ಲ. ಕೆಲ ಜನರೊಂದಿಗೆ ನಾನು ಮಾತನಾಡಬೇಕು. ಅವರು ನೀಡುವ ಉತ್ತರಕ್ಕೆ ಪ್ರತಿ ಯಾಗಿ ಮತ್ತೆ ಪ್ರಶ್ನೆಗಳು ಉದ್ಭವಿಸಿದಲ್ಲಿ
ಅವುಗಳಿಗೂ ನಾನು ಉತ್ತರ ಬಯಸುತ್ತೇನೆ ಎಂದೂ ಆತ ಹೇಳಿದ್ದಾನೆ’ ಎಂದು ತಿಳಿಸಿದರು.

‘ನಿಮ್ಮ ಕಡೆಯಿಂದ ಏನಾದರೂ ಸಣ್ಣ ತಪ್ಪಾದಲ್ಲಿ, ನಾನು ಇಡೀ ಕಟ್ಟಡಕ್ಕೆ ಬೆಂಕಿ ಇಡುತ್ತೇನೆ. ನಾನು ಸಾಯುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಕ್ಕಳಿಗೆ ಅನಗತ್ಯ ಹಾನಿಯಾಗುತ್ತದೆ. ಅವರು ಆತಂಕಗೊಳ್ಳುವುದು ಖಚಿತ. ಈ ರೀತಿ ಏನಾದರೂ ಆದಲ್ಲಿ ನನ್ನನ್ನು ಹೊಣೆ ಮಾಡಬಾರದು ಎಂದು ರೋಹಿತ್‌ ಹೇಳಿ ರುವುದು ವಿಡಿಯೊದಲ್ಲಿದೆ’ ಎಂದರು.

‘ಆತನೊಂದಿಗೆ ನಡೆಸಿದ ಮಾತುಕತೆಗಳು ಫಲಪ್ರದವಾಗುವುದಿಲ್ಲ ಎಂಬುದು ಖಚಿತವಾದ ಬಳಿಕ, ಪೊಲಿಸರು ಶೌಚಾಲಯ ಮೂಲಕ ಸ್ಟುಡಿಯೊ ಪ್ರವೇಶಿಸಿದರು’. 

‘ಆತನ ಬಳಿ ಏರ್‌ ಗನ್‌ ಹಾಗೂ ರಾಸಾಯನಿಕ ಪದಾರ್ಥಗಳಿದ್ದವು. ಏರ್‌ ಗನ್‌ನಿಂದ ಮಕ್ಕಳಿಗೆ ಅಪಾಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ಗುಂಡು ಹಾರಿಸಿದರು. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂಜೆ 5.15ಕ್ಕೆ ರೋಹಿತ್‌ ಮೃತಪಟ್ಟ’ ಎಂದು ನಲವಡೆ ಹೇಳಿದರು.

‘ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’

‘ಕಳೆದ ಮೂರು ದಿನಗಳಿಂದ ಆಡಿಷನ್‌ ನಡೆಯುತ್ತಿತ್ತು. ಊಟದ ಸಮಯವಾದರೂ ಮಕ್ಕಳು ಸ್ಟುಡಿಯೊದಿಂದ ಹೊರಗೆ ಬಾರದಿದ್ದಾಗ, ಆತಂಕ ಮನೆ ಮಾಡಿತು’ ಎಂದು ಪ್ರತ್ಯಕ್ಷದರ್ಶಿಗಳಲ್ಲೊಬ್ಬರಾದ ದಿನೇಶ್‌ ಗೋಸಾವಿ ಹೇಳುತ್ತಾರೆ.

‘ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗಲಷ್ಟೆ, ಮಕ್ಕಳ ಅಪಹರಣವಾಗಿದೆ ಎಂಬುದು ತಿಳಿಯಿತು’ ಎಂದರು.

‘ಕಾನೂನುಬದ್ಧವಾಗಿ ಈ ಸ್ಟುಡಿಯೊವನ್ನು ಸ್ಥಾಪಿಸಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಹೇಳಿದರು.

ರಾಜಕೀಯ ಜಟಾಪಟಿ ಸಾಧ್ಯತೆ

ಮಕ್ಕಳನ್ನು ಒತ್ತೆಯಾಗಿಟ್ಟುಕೊಂಡಿದ್ದ ರೋಹಿತ್‌ ಆರ್ಯ ಪೊಲೀಸರ ಗುಂಡಿಗೆ ಬಲಿಯಾದ ಬೆನ್ನಲ್ಲೇ, ಆತನ ಕುರಿತು ಮುಂಬೈ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ. ಇನ್ನೊಂದೆಡೆ, ಈ ಪ್ರಕರಣವು ಭಾರಿ ರಾಜಕೀಯ ತಿರುವು ಪಡೆಯುವ ಸಾಧ್ಯತೆಗಳು ಕಂಡುಬಂದಿವೆ.

ಶಿವಸೇನಾ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ದೀಪಕ್ ಕೇಸರಕರ್‌ ಅವರೊಂದಿಗೆ ಮಾತನಾಡಲು ರೋಹಿತ್‌ ಆರ್ಯ ಬಯಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಪ್ರಕರಣಕ್ಕೆ ಮುಂಬೈ, ಪುಣೆ ಹಾಗೂ ನಾಗ್ಪುರದ ಜೊತೆ ನಂಟಿದೆ ಎಂದೂ ಹೇಳಲಾಗುತ್ತಿದೆ.

‘ರೋಹಿತ್‌ ಆರ್ಯ 2023ರಲ್ಲಿ ‘ಸ್ವಚ್ಛತಾ ಮಾನಿಟರ್’ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ನನ್ನ ಈ ಪರಿಕಲ್ಪನೆಗಾಗಿ ನನಗೆ ಹಣ ನೀಡದೇ, ಅದನ್ನು ಕಸಿದುಕೊಳ್ಳಲಾಗಿತ್ತು’ ಎಂದು ರೋಹಿತ್‌ ಆರೋಪಿಸಿದ್ದರು.

ತನ್ನ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಈ ಹಿಂದೆ ಅವರು ಪ್ರತಿಭಟನೆ ನಡೆಸಿದ್ದರು. ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದರು.

ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ದೀಪಕ್‌ ಕೇಸರಕರ್,‘ರೋಹಿತ್‌ ಸ್ವಚ್ಛ ಮಾನಿಟರ್ ಯೋಜನೆ ಜಾರಿಗೊಳಿಸಿದ್ದ. ಸರ್ಕಾರ ಕೈಗೊಂಡಿದ್ದ ಆಂದೋಲನದಲ್ಲಿಯೂ ಪಾಲ್ಗೊಂಡಿದ್ದ ಆತ, ಮಕ್ಕಳಿಂದಲೇ ನೇರವಾಗಿ ಶುಲ್ಕ ಸಂಗ್ರಹಿಸಿದ್ದ ಎಂಬುದಾಗಿ ಇಲಾಖೆ ತಿಳಿಸಿತ್ತು’ ಎಂದು ಹೇಳಿದ್ದಾರೆ.

‘ತನ್ನ ಸಮಸ್ಯೆಗಳ ಕುರಿತು ಇಲಾಖೆಯೊಂದಿಗೆ ಆತ ಚರ್ಚಿಸಿ, ಬಗೆಹರಿಸಿಕೊಳ್ಳಬೇಕಿತ್ತು. ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದು ತಪ್ಪು’ ಎಂದು ಹೇಳಿದರು.

‘ಶಿಕ್ಷಣ ಇಲಾಖೆಗಾಗಿ ಯೋಜನೆಗಳನ್ನು ಪೂರ್ಣಗೊಳಿಸಿದ್ದರೂ ₹2 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ರೋಹಿತ್ ಆರೋಪಿಸಿದ್ದ’ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದನನಾಯಕ ವಿಜಯ ವಡೆಟ್ಟಿವಾರ್‌ ಹೇಳಿದರು.

‘ಈ ಘಟನೆಗೆ ಯಾರನ್ನು ಹೊಣೆ ಮಾಡಬೇಕು?ಆಗಿನ ಶಿಕ್ಷಣ ಸಚಿವ ಕೇಸರಕರ್ ಜವಾಬ್ದಾರಿ ತೆಗೆದುಕೊಳ್ಳುವರೋ ಇಲ್ಲವೇ ಮಹಾಯುತಿ ನೇತೃತ್ವದ ಸರ್ಕಾರವೋ’ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರ ಸಾಲ ಮನ್ನಾ ಮಾಡದ್ದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಲ್‌ ಪಾವತಿ ತಡವಾಗುತ್ತಿರುವುದರಿಂದ ಗುತ್ತಿಗೆದಾರರ ಜೀವನ ಕಷ್ಟವಾಗಿದೆ. ಈಗ ರೋಹಿತ್ 17 ಮಕ್ಕಳನ್ನು ಒತ್ತೆಯಾಗಿ ಇಟ್ಟುಕೊಂಡಿದ್ದ’ ಎಂದೂ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.