ADVERTISEMENT

ಸಮಾಜವನ್ನು ಒಡೆಯುವವರಿಗೆ ದ್ರೌಪದಿ ಆಯ್ಕೆಯಿಂದ ತಕ್ಕ ಉತ್ತರ: ಅಮಿತ್ ಶಾ

ಪಿಟಿಐ
Published 23 ಜುಲೈ 2022, 12:22 IST
Last Updated 23 ಜುಲೈ 2022, 12:22 IST
ಅಮಿತ್ ಶಾ
ಅಮಿತ್ ಶಾ   

ಗಾಂಧಿನಗರ: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿರುವುದನ್ನು 'ಐತಿಹಾಸಿಕ' ಎಂದು ಕೇಂದ್ರ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.

ಅಲ್ಲದೆ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರ ಆಯ್ಕೆಯು, ಬುಡಕಟ್ಟು ಜನಾಂಗದ ಸಬಲೀಕರಣದ ಬಗ್ಗೆ ಮಾತನಾಡಿ ಸಮಾಜವನ್ನು ಒಡೆಯುವವರಿಗೆ ನೀಡಿದ ತಕ್ಕ ಉತ್ತರವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡುವುದರಿಂದ ಮಾತ್ರ ಬುಡಕಟ್ಟು ಸಮುದಾಯದ ಸಬಲೀಕರಣವಾಗುವುದಿಲ್ಲ. ಅದನ್ನು ಈ ಮೂಲಕ (ಮುರ್ಮು ಗೆಲುವನ್ನು ಉಲ್ಲೇಖಿಸಿ) ಸಾಧಿಸಲಾಗುತ್ತದೆ ಎಂದು ಹೇಳಿದರು.

ಬುಡಕಟ್ಟಿನ ಸಂತಾಲ ಸಮುದಾಯದ ವ್ಯಕ್ತಿಯೊಬ್ಬರು ದೇಶದ ಪರಮೋಚ್ಚ ಹುದ್ದೆ ಅಲಂಕರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಜಯವಾಗಿದೆ ಎಂದು ಶಾ ಬಣ್ಣಿಸಿದ್ದಾರೆ.

ಬುಡಕಟ್ಟು ಸಬಲೀಕರಣದ ಬಗ್ಗೆ ಮಾತನಾಡುವ ಮತ್ತು ಸಮುದಾಯಗಳನ್ನು ಒಡೆದು ಅದರ ಹೆಸರಿನಲ್ಲಿ ರಾಜಕೀಯ ಮಾಡುವ ಎಲ್ಲರಿಗೂ ಮುರ್ಮು ಅವರ ಗೆಲುವಿನಂದ ತಕ್ಕ ಉತ್ತರ ಸಿಕ್ಕಿದೆ. ಈ ಬಗ್ಗೆ ಮಾತನಾಡುವುದರಿಂದ ಬುಡಕಟ್ಟು ಜನಾಂಗದ ಸಬಲೀಕರಣವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಅಧಿಕಾರವಧಿಯಲ್ಲೇ ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಹುದ್ದೆ ಅಲಂಕರಿಸಿರುವುದನ್ನು ಅಮಿತ್ ಶಾ ನೆನಪಿಸಿದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದರಲ್ಲೇ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದರು. ರಾಮನಾಥ್ ಕೋವಿಂದ್ ಬಡ, ದಲಿತ ಕುಟುಂಬದಿಂದ ಬಂದವರು. ದ್ರೌಪದಿ ಮುರ್ಮು ಅವರು ಬಂದಿರುವ ಪ್ರದೇಶದಲ್ಲಿ ಅನೇಕರಿಗೆ ರಾಷ್ಟ್ರಪತಿ ಅಂದರೆ ಏನೆಂಬುದೇ ತಿಳಿದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.