ADVERTISEMENT

ಮುರ್ಷಿದಾಬಾದ್‌ನಲ್ಲಿ ತ್ರಿವಳಿ ಕೊಲೆಗೆ ಹಣದ ವಿಚಾರದಲ್ಲಿನ ಜಗಳ ಕಾರಣ: ಪೊಲೀಸ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 15:50 IST
Last Updated 15 ಅಕ್ಟೋಬರ್ 2019, 15:50 IST
ಪಾಲ್ ಮತ್ತು ಕುಟುಂಬ
ಪಾಲ್ ಮತ್ತು ಕುಟುಂಬ   

ಕೋಲ್ಕತ್ತ:ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತ, ಆತನ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಮಗನ ಹತ್ಯೆಗೆ ಹಣದ ವಿಚಾರದಲ್ಲುಂಟಾದ ಜಗಳವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಗುರುವಾರ ಮುರ್ಷಿದಾಬಾದ್‌ನಲ್ಲಿ ತ್ರಿವಳಿ ಕೊಲೆ ನಡೆದಿದ್ದು, ಹತ್ಯೆಗೀಡಾದ ವ್ಯಕ್ತಿಯ ಊರಿನಿಂದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ರಾಜಕೀಯ ದ್ವೇಷದಿಂಜನಡೆದುದಲ್ಲ. ಇದು ಹಣದ ವಿಚಾರದಲ್ಲಿ ನಡೆದ ಕೊಲೆ ಎಂದು ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಹತ್ಯೆಗೀಡಾದ ಬಂಧು ಪ್ರಕಾಶ್ ಪಾಲ್ ಅವರ ಊರು ಸಾಗರ್‌ಧಿಗಿಯಿಂದ ಆರೋಪಿಕಟ್ಟಡ ನಿರ್ಮಾಣ ಕಾರ್ಮಿಕನಾದ ಉತ್ಪನ್ ಬೆಹರಾನನ್ನು ಪೊಲೀಸರುಬಂಧಿಸಿದ್ದಾರೆ.

ಪಾಲ್ ಅವರು ಉತ್ಪನ್ ಬೆಹರಾ ಅವರಿಗೆ ನೀಡಿದ್ದ ವಿಮಾ ಯೋಜನೆಯ ಹಣದ ವಿಚಾರದಲ್ಲಿ ಜಗಳ ನಡೆದಿತ್ತು. ವಿಮೆ ಪ್ರೀಮಿಯಂ ಪಾವತಿಸಿ ರಸೀದಿ ಸಿಗದೇ ಇದ್ದಾಗ ಬೆಹರಾ ಅವರು ಹಣ ವಾಪಸ್ ಕೊಡುವಂತೆ ಪಾಲ್‌ಗೆ ಒತ್ತಾಯಿಸಿದ್ದಾರೆ. ಪಾಲ್ ಅವರ ಮನೆಗೆ ಹಣ ಕೇಳಲು ಹೋದಾಗ ಬೆಹರಾನನ್ನ ಅವಮಾನಿಸಲಾಗಿದೆ. ಇದೇ ಸಿಟ್ಟಿನಲ್ಲಿ ಬೆಹರಾ ಪಾಲ್ ಕುಟುಂಬವನ್ನು ಮುಗಿಸುವ ಯೋಚನೆ ಮಾಡಿದ್ದಾರೆ.

ಗುರುವಾರ ಪಾಲ್ ಮನೆಗೆ ಮಚ್ಚು ಹಿಡಿದುಕೊಂಡು ಬಂದಿದ್ದ ಬೆಹರಾ, ಆ ಕುಟುಂಬದ ಹತ್ಯೆ ಮಾಡಿ ರೈಲು ಹತ್ತಿ ಹೊರಟು ಹೋಗಿದ್ದಾರೆ. ಬೆಹರಾ ಅವರ ಪ್ರಹಾರಕ್ಕೊಳಗಾದ ಆ ಕುಟುಂಬದ ಸದಸ್ಯರು ಐದು ನಿಮಿಷಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವ್ಯಕ್ತಿಯೊಬ್ಬರುಓಡುತ್ತಿರುವುದನ್ನು ನೋಡಿದ ಹಾಲು ಮಾರಾಟಗಾರನ ಸಾಕ್ಷ್ಯ ಹೇಳಿಕೆ ಮತ್ತು ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಬೆಹರಾನನ್ನು ಪತ್ತೆ ಹಚ್ಚಿದ್ದರು.

ಆದಾಗ್ಯೂ, ಬೆಹರಾ ವಿರುದ್ದ ವ್ಯಥಾರೋಪ ಮಾಡಲಾಗಿದೆ ಎಂದು ಆತನ ಸಹೋದರಿ ಸ್ಕಬಾನಿ ಸರ್ಕಾರ್ ಹೇಳಿದ್ದಾರೆ. ಆದರೆ ಬೆಹರಾ ಅವರ ಫೋನ್ ಕರೆ ಮತ್ತು ಹತ್ಯೆಗೆ ಬಳಸಿದ ಆಯುಧ ಸಿಕ್ಕಿದೆ ಎಂದಿದ್ದಾರೆ ಪೊಲೀಸರು.

ಪಾಲ್ ಕುಟುಂಬದ ಹತ್ಯೆ ಸುದ್ದಿಯಾಗುತ್ತಿದ್ದಂತೆ ಹತ್ಯೆಯ ಭೀಕರ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮುರ್ಷಿದಾಬಾದ್‌ನಲ್ಲಿ ನಡೆದದ್ದು ರಾಜಕೀಯ ದ್ವೇಷದ ಕೊಲೆ ಎಂದು ಹೇಳಿ ಪ್ರತಿಭಟನೆಯ ದನಿಯೆತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.