ADVERTISEMENT

Murshidabad violence: CM ಮಮತಾ ಬ್ಯಾನರ್ಜಿ ರಾಜೀನಾಮೆಗೆ ಅಮಿತ್ ಮಾಳವಿಯಾ ಆಗ್ರಹ

ಪಿಟಿಐ
Published 20 ಏಪ್ರಿಲ್ 2025, 9:22 IST
Last Updated 20 ಏಪ್ರಿಲ್ 2025, 9:22 IST
ಅಮಿತ್‌ ಮಾಳವಿಯಾ 
ಅಮಿತ್‌ ಮಾಳವಿಯಾ    

ಕೋಲ್ಕತ್ತ: ಮುರ್ಶಿದಾಬಾದ್ ಹಿಂಸಾಚಾರ ತಡೆಯುವಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವಿಯಾ ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿ ಹಾಕಲು ಬ್ಯಾನರ್ಜಿ ಅವರು, ವಿರೋಧ ಪಕ್ಷಗಳು ಮತ್ತು ರಾಜಕೀಯೇತರ ಸಂಘಟನೆಗಳನ್ನು ದೂಷಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ನಡೆದ ಕೋಮುಗಲಭೆ ಪೂರ್ವಯೋಜಿತ, ಬಾಹ್ಯ ಅಂಶಗಳಿಂದ ಪ್ರಚೋದಿಸಲಾಗಿದೆ ಎಂಬ ಮುಖ್ಯಮಂತ್ರಿ ಹೇಳಿಕೆಯನ್ನು ರಾಜ್ಯ ಪೊಲೀಸರೇ ತಳ್ಳಿಹಾಕಿದ್ದಾರೆ’ ಎಂದು ಹೇಳಿದ್ದಾರೆ.

ಬ್ಯಾನರ್ಜಿ ಅವರು ತಮ್ಮ ವೋಟ್‌ಬ್ಯಾಂಕ್‌ಗಾಗಿ ಯಾವುದೇ ಪುರಾವೆಗಳಿಲ್ಲದೆ, ವಿರೋಧ ಪಕ್ಷಗಳು, ಬಿ‌ಎಸ್ಎಫ್‌ ಹಾಗೂ ಕೇಂದ್ರದ ಸಂಸ್ಥೆಗಳನ್ನು ದೂಷಿಸುತ್ತಾರೆ. ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬಂದಾಗಲೆಲ್ಲಾ ಅವರು ಹಿಂದೂ ಸಮುದಾಯವನ್ನು ಗುರಿಯಾಗಿಸುತ್ತಾರೆ. ಮಮತಾ ಬ್ಯಾನರ್ಜಿ ಅವರು ಪದೇ ಪದೇ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದು, ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಮಾಳವಿಯಾ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಏಪ್ರಿಲ್ 11 ಮತ್ತು 12 ರಂದು ಮುರ್ಶಿದಾಬಾದ್‌ನ ಸುತಿ, ಧುಲಿಯನ್ ಮತ್ತು ಜಂಗೀಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಕ್ಫ್‌ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.