ADVERTISEMENT

‘ಬಾಬರಿ’ ಧ್ವಂಸ ಪ್ರಕರಣದ ತೀರ್ಪು ಪ್ರಶ್ನಿಸಲು ಮುಸ್ಲಿಂ ಮಂಡಳಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 15:01 IST
Last Updated 17 ಅಕ್ಟೋಬರ್ 2020, 15:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ನಿರ್ಧರಿಸಿದೆ.

ಎಐಎಂಪಿಎಲ್‌ಬಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ‘ಸಭೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಕುರಿತು ‘ಆಶ್ಚರ್ಯ’ ವ್ಯಕ್ತಪಡಿಸಿದ ಸದಸ್ಯರು, ಇದು ‘ದುರ್ದೈವ’ ಎಂದರು. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬೇಕಾದ ಎಲ್ಲ ಆಧಾರಗಳೂ ಇವೆ’ ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಸಂವಿಧಾನದಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ವಿಚಾರವಿರುವುದರಿಂದ ಶಬರಿಮಲೆ ಪ್ರಕರಣದಲ್ಲೂ ಮಧ್ಯಪ್ರವೇಶಿಸಲು ಮಂಡಳಿಯು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತೀರ್ಪು ‘ತೃಪ್ತಿ’ ತಂದಿಲ್ಲ. ಹೈಕೋರ್ಟ್‌ನಲ್ಲಿ ಈ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಈ ಹಿಂದೆ ಬಾಬರಿ ಮಸೀದಿ ಕಾರ್ಯಕಾರಿ ಸಮಿತಿ(ಬಿಎಂಎಸಿ) ಸಂಚಾಲಕ ಜಾಫರ್ಯಾಬ್‌ ಜಿಲಾನಿ ತಿಳಿಸಿದ್ದರು. ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ನಾಯಕರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇದ್ದರೂ, ಸಿಬಿಐ ಸೂಕ್ತವಾಗಿ ವಾದಿಸಿಲ್ಲ’ ಎಂದು ಜಿನಾಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.