ಲಖನೌ: ಮುಸ್ಲಿಂ ಸಮುದಾಯುದ ಯವತಿಯೊಂದಿಗೆ ಮಾತನಾಡುತ್ತಿದ್ದ ಹಿಂದೂ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣ ಉತ್ತರಪ್ರದೇಶದ ಕೋಮುಸೂಕ್ಷ್ಮ ಜಿಲ್ಲೆಯಾದ ಮುಜಫ್ಫರ್‌ನಗರದಲ್ಲಿ ನಡೆದಿದೆ. ಬಳಿಕ, ಯುವತಿಯ ಹಿಜಾಬ್ ಅನ್ನು ಕಿತ್ತುಹಾಕಲಾಗಿದೆ.
ವರದಿಯ ಪ್ರಕಾರ, ಬಾಲಕಿಯ ತಾಯಿ ಹಾಗೂ ಯುವಕ ಸಚಿನ್ ಅವರು ಖಾಸಗಿ ಬ್ಯಾಂಕಿನಲ್ಲಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕೂಡ ಜನರು ಪಡೆದ ಸಾಲದ ಕಂತು ಪಡೆಯಲು ಜತೆಯಾಗಿ ತೆರಳುತ್ತಿದ್ದರು. ಘಟನೆ ನಡೆದ ದಿನ, ತಾಯಿ ತನ್ನ ಬದಲಾಗಿ ಯುವಕನ ಜೊತೆ ಮಗಳನ್ನು ಕಳುಹಿಸಿದ್ದರು.
ಹಣ ಪಡೆದುಕೊಂಡು ಹಿಂತಿರುಗುತ್ತಿದ್ದ ವೇಳೆ, ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಖಾಲಪರ್‌ನ ದರ್ಜಿ ಗಲ್ಲಿಯಲ್ಲಿ ಅಡ್ಡಗಟ್ಟಿದ ಗುಂಪೊಂದು ಇಬ್ಬರನ್ನು ಪ್ರಶ್ನಿಸಿದೆ. ನಂತರ ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿ ಕೆನ್ನೆಗೂ ಹೊಡೆದಿದ್ದಾರೆ. ಹಲ್ಲೆ ನಡೆಸಿದ್ದನ್ನು ವಿಡಿಯೊ ಮಾಡಿದ್ದಾರೆ.
ಶನಿವಾರವೇ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡಿತ್ತು. ಇದರ ಆಧಾರದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹಿಂದೂ ಬಾಲಕರ ಜೊತೆ ಓಡಾಡಿದ ಆರೋಪದ ಮೇಲೆ ಇಬ್ಬರು ಮುಸ್ಲಿಂ ಯುವತಿಯರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಶಹರಾನ್‌ಪುರದಲ್ಲಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.