ADVERTISEMENT

ಮುಸ್ಲಿಂ ವ್ಯಕ್ತಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯ: ಇಬ್ಬರ ಸೆರೆ

ಮಧ್ಯಪ್ರದೇಶದಲ್ಲಿ ನಡೆದ ಘಟನೆ, ಸರ್ಕಾರ ‘ಮೂಕಪ್ರೇಕ್ಷಕ’– ಕಾಂಗ್ರೆಸ್ ಟೀಕೆ

ಪಿಟಿಐ
Published 29 ಆಗಸ್ಟ್ 2021, 13:55 IST
Last Updated 29 ಆಗಸ್ಟ್ 2021, 13:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭೋಪಾಲ್, ಉಜ್ಜಯಿನಿ: ಗುಜರಿ ವ್ಯಾಪಾರಿಯಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಮಲ್ ಸಿಂಗ್ (22) ಮತ್ತು ಈಶ್ವರ್ ಸಿಂಗ್ (27) ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಕೋಮುಸೌಹಾರ್ದಕ್ಕೆ ಭಂಗ ತಂದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ADVERTISEMENT

‘ಮಹಿದ್‌ಪುರ ಪಟ್ಟಣದ ನಿವಾಸಿ ಅಬ್ದುಲ್ ರಶೀದ್ ಅವರು ಬಹಳ ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಿದ್ದಾರೆ. ಅವರು ತಮ್ಮ ಮಿನಿ ಟ್ರಕ್‌ನಲ್ಲಿ ಸಿಕ್ಲಿ ಗ್ರಾಮಕ್ಕೆ ಗುಜರಿ ವಸ್ತುಗಳ ಸಂಗ್ರಹಕ್ಕೆ ತೆರಳಿದ್ದಾಗ ಅವರನ್ನು ಗ್ರಾಮ ಬಿಟ್ಟು ತೆರಳುವಂತೆ ಒತ್ತಾಯಿಸಿ, ಮತ್ತೊಮ್ಮೆ ಇಲ್ಲಿ ಗುಜರಿ ವ್ಯಾಪಾರಕ್ಕೆ ಬಾರದಂತೆ ಬೆದರಿಕೆಯೊಡ್ಡಲಾಗಿದೆ. ಅಬ್ದುಲ್ ಗ್ರಾಮ ಬಿಟ್ಟು ತೆರಳುವಾಗ, ಪಿಪ್ಲಿಯಾ ಧುಮಾದ ಎನ್ನುವ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ, ನಿಂದಿಸಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದಾರೆ. ಅವರ ಒತ್ತಡಕ್ಕೆ ಮಣಿದ ಅಬ್ದುಲ್ ನಂತರ ಅಲ್ಲಿಂದ ವಾಪಸ್ ಬಂದಿದ್ದಾರೆ’ ಎಂದು ಮಹಿದ್‌ಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಆರ್.ಕೆ. ರೈ ಸುದ್ದಿಗಾರರಿಗೆ ವಿವರಿಸಿದರು.

ಕಾಂಗ್ರೆಸ್ ಟೀಕೆ: ‘ಈ ಹಿಂದೆ ಇಂದೋರ್ ಮತ್ತು ದೇವಾಸ್‌ನಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಸರ್ಕಾರ ಎಲ್ಲವನ್ನೂ ಮೂಕಪ್ರೇಕ್ಷಕನಂತೆ ನೋಡುತ್ತಿದೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ಟೀಕಿಸಿದ್ದಾರೆ.

‘ಇಂಥ ಘಟನೆಗಳ ಕುರಿತು ರಾಜ್ಯ ಸರ್ಕಾರವು ಕಠಿಣಕ್ರಮ ಕೈಗೊಳ್ಳುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.