ADVERTISEMENT

ಹಿಜಾಬ್: ‘ಹೈ‘ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಐಎಎನ್ಎಸ್
Published 28 ಮಾರ್ಚ್ 2022, 11:29 IST
Last Updated 28 ಮಾರ್ಚ್ 2022, 11:29 IST
ಸುಪ್ರೀಂ ಕೋರ್ಟ್: ಪಿಟಿಐ ಚಿತ್ರ
ಸುಪ್ರೀಂ ಕೋರ್ಟ್: ಪಿಟಿಐ ಚಿತ್ರ   

ನವದೆಹಲಿ: ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ‌ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದ ಹೈಕೋರ್ಟ್, ತರಗತಿಗಳಲ್ಲಿ ಹಿಜಾಬ್‌ನ ನಿಷೇಧವನ್ನು ಎತ್ತಿಹಿಡಿದಿತ್ತು.

ಪ್ರಕರಣದ ಇಬ್ಬರು ಅರ್ಜಿದಾರರಾದ ಮುನಿಸಾ ಬುಶ್ರಾ ಮತ್ತು ಜಲೀಸಾ ಸುಲ್ತಾನಾ ಯಾಸೀನ್ ಅವರ ಜೊತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ತಪ್ಪಾದ ಕಾರಣಗಳನ್ನ ನೀಡಿ ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಇದು ಮುಸ್ಲಿಂ ಹೆಣ್ಣುಮಕ್ಕಳ ವಿರುದ್ಧದ ನೇರ ತಾರತಮ್ಯದ ಪ್ರಕರಣವಾಗಿದೆ. ಒಂದು ಧರ್ಮದ ವ್ಯಕ್ತಿಗೆ 'ಒಂದು ಬಟ್ಟೆಯಿಂದ ಕೂದಲನ್ನು ಮುಚ್ಚಲು' ಅವಕಾಶ ನೀಡದೆ ಸಮವಸ್ತ್ರದಲ್ಲಿ ‘ಏಕರೂಪತೆ‘ತರಲು ಹೆಚ್ಚು ಒತ್ತು ನೀಡುವುದು ನ್ಯಾಯದ ಅಪಹಾಸ್ಯವಾಗಿದೆ’ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

‘ಅಗತ್ಯ ಧಾರ್ಮಿಕ ಆಚರಣೆಯ (ಇಆರ್‌ಪಿ) ತತ್ವಗಳ ಅಡಿಯಲ್ಲಿ ಅಗತ್ಯ ವಸ್ತುಗಳ ನಿರ್ಣಯವು ಧಾರ್ಮಿಕ ಆಚರಣೆಯ ನಿರ್ಣಯದ ಕಲ್ಪನೆಯೊಂದಿಗೆ ಪ್ರಾರಂಭವಾಗಿದೆ. ಧರ್ಮದ ಅಡಿಯಲ್ಲಿ ಯಾವುದು ಅಗತ್ಯ ಎಂಬುದನ್ನು ನಿರ್ಧರಿಸುವುದು ಆ ಧಾರ್ಮಿಕ ಪಂಗಡದ ಸಂಪೂರ್ಣ ಸ್ವಾಯತ್ತತೆಯೊಳಗೆ ಬರುತ್ತದೆ’ಎಂದು ವಾದಿಸಲಾಗಿದೆ.

ಮೂಲಭೂತ ಹಕ್ಕುಗಳ ರಕ್ಷಣೆಯ ವಿಷಯದ ವಿಚಾರವಾಗಿ ಉಚ್ಚ ನ್ಯಾಯಾಲಯದ ತೀರ್ಪು ಸಂಪೂರ್ಣವಾಗಿ ತಪ್ಪು ವ್ಯಾಖ್ಯಾನವನ್ನು ನೀಡಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

‘ಇದು ಸಂಪೂರ್ಣವಾಗಿ ಅವೈಚಾರಿಕ ಮತ್ತು ಭಾರತದ ಸಂವಿಧಾನದಲ್ಲಿ ಹೇಳಿದಂತೆ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕೆ ವಿರುದ್ಧವಾಗಿದೆ’ಎಂದು ಅದು ಹೇಳಿದೆ.

ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಮನವಿಯನ್ನು ಆಲಿಸಲು ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗಪಡಿಸಲು ಸಾಧ್ಯವಿಲ್ಲ ಎಂದು ಮಾರ್ಚ್ 24 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ಮಧ್ಯೆ, ವಕೀಲರಾದ ಅದೀಲ್ ಅಹ್ಮದ್ ಮತ್ತು ರಹಮತುಲ್ಲಾ ಕೊತ್ವಾಲ್ ಮೂಲಕ ಸಲ್ಲಿಸಲಾದ ಮತ್ತೊಂದು ಅರ್ಜಿಯಲ್ಲಿ, ಹೈಕೋರ್ಟ್ ಆದೇಶವು ಮುಸ್ಲಿಮೇತರ ವಿದ್ಯಾರ್ಥಿನಿಯರು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ಅಸಮಂಜಸವಾದ ವರ್ಗೀಕರಣವನ್ನು ಸೃಷ್ಟಿಸುತ್ತದೆ. ಆ ಮೂಲಕ ಭಾರತೀಯ ಸಂವಿಧಾನದ ಮೂಲ ರಚನೆಯಾದ ಜಾತ್ಯತೀತತೆಯ ಪರಿಕಲ್ಪನೆಯ ನೇರ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ.

‘ಈ ಆದೇಶವು ಭಾರತೀಯ ಸಂವಿಧಾನದ ಪರಿಚ್ಛೇದ 14, 15, 19, 21 ಮತ್ತು 25 ರ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಭಾರತವು ಸಹಿ ಮಾಡಿರುವ ಅಂತರರಾಷ್ಟ್ರೀಯ ಒಪ್ಪಂದಗಳ ಮೂಲ ತತ್ವಗಳನ್ನು ಉಲ್ಲಂಘಿಸುತ್ತದೆ’ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.