ADVERTISEMENT

ಬಟ್ಟೆ ಮೇಲೆ ಭಗವದ್ಗೀತೆಯ ಸಾಲುಗಳನ್ನು ಮೂಡಿಸಿದ ಮುಸ್ಲಿಂ ವ್ಯಾಪಾರಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 7:53 IST
Last Updated 16 ಫೆಬ್ರುವರಿ 2023, 7:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಣಸಿ: ಇಲ್ಲಿನ ಮುಸ್ಲಿಂ ಸೀರೆ ವ್ಯಾಪಾರಿ ಹಾಜಿ ಇರ್ಷಾದ್ ಅಲಿ ಎಂಬವರು ಗಂಗಾಜಲ ಮತ್ತು ಮಣ್ಣನ್ನು ಬಳಸಿ, ಬಿಳಿ ಹತ್ತಿ ಬಟ್ಟೆಯ ಮೇಲೆ ಭಗವದ್ಗೀತೆಯ ಸಾಲುಗಳನ್ನು ಬರೆದಿದ್ದಾರೆ.

ತಮ್ಮ ಈ ಕಲಾಕೃತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರಿಗೆ ಉಡುಗೊರೆಯಾಗಿ ನೀಡಲು ಅಲಿ ಬಯಸಿದ್ದಾರೆ.

‘ನಾನು 14 ವರ್ಷ ವಯಸ್ಸಿನಲ್ಲಿದ್ದಾಗ ಧಾರ್ಮಿಕ ವಿಚಾರಗಳನ್ನು ಬರೆಯಲು ಆರಂಭಿಸಿದೆ. ಆಸಕ್ತಿ ಹೆಚ್ಚಾದಂತೆ ಪವಿತ್ರ ಕುರಾನ್‌ ಅನ್ನು ಬರೆಯಲು ನಿರ್ಧರಿಸಿದೆ. 30 ಪ್ಯಾರಾಗಳನ್ನು ಬರೆಯಲು 6 ವರ್ಷ ಬೇಕಾಯಿತು. ಗಂಗಾ ನದಿಯ ಮಣ್ಣು ಮತ್ತು ಮೆಕ್ಕಾದಿಂದ ತಂದ ನೀರನ್ನು ಬಳಸಿ ಮಾಡಿದ ಶಾಯಿಯಿಂದ ಅದನ್ನು ಬರೆದಿದ್ದೆ’ ಎಂದು ಅಲಿ ತಿಳಿಸಿದ್ದಾರೆ.

ADVERTISEMENT

ಕಲಾಕೃತಿಗಳ ಬೈಂಡಿಂಗ್‌ಗಾಗಿ ಬನಾರಸ್ ರೇಷ್ಮೆ ಸೀರೆಯನ್ನು ಬಳಸಿದ್ದಾರೆ.

ಇದೇ ರೀತಿ ಭಗವದ್ಗೀತೆಯ ಸಾಲುಗಳನ್ನು ಬರೆಯಲು ಗಂಗಾಜಲ ಮತ್ತು ಮಣ್ಣಿನಿಂದ ಮಾಡಿದ ಶಾಯಿ ಬಳಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತವನ್ನು ಕಲಿತೆ. ಇದಕ್ಕೆ ಸ್ಥಳೀಯ ಅರ್ಚಕರ ನೆರವು ಪಡೆದುಕೊಂಡೆ’ಎಂದು ಹೇಳಿದ್ದಾರೆ.

ಅಲಿ, ಹತ್ತಿ ಬಟ್ಟೆಯ ಮೇಲೆ ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಮತ್ತು ರಾಷ್ಟ್ರಗೀತೆಯನ್ನೂ ಬರೆದಿದ್ದಾರೆ.

ಅವರ ಈ ಕಾರ್ಯಕ್ಕೆ ಕುಟುಂಬದವರೆಲ್ಲ ಬೆಂಬಲ ನೀಡಿದ್ದಾರೆ. ಹತ್ತಿ ಬಟ್ಟೆಯ ಹಾಳೆಗಳನ್ನು ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು ಸಿದ್ಧಪಡಿಸಿದರೆ, ಶಾಯಿಯನ್ನು ಅವರ ಇಬ್ಬರು ಪುತ್ರರು ತಯಾರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.