ADVERTISEMENT

ಸಂಗಾತಿ ಇದ್ದೂ ಮುಸ್ಲಿಮರು ಸಹಜೀವನ ಸಂಬಂಧ ಹಕ್ಕು ಸಾಧಿಸಲಾಗದು:ಅಲಹಾಬಾದ್ ಹೈಕೋರ್ಟ್

ಪಿಟಿಐ
Published 9 ಮೇ 2024, 3:19 IST
Last Updated 9 ಮೇ 2024, 3:19 IST
<div class="paragraphs"><p>ನ್ಯಾಯಾಲಯ</p></div>

ನ್ಯಾಯಾಲಯ

   

ಲಖನೌ: ಸಂಗಾತಿ ಇರುವಾಗ ಮುಸ್ಲಿಮರು ಬೇರೊಬ್ಬರ ಜೊತೆ ಸಹ ಜೀವನ ಸಂಬಂಧ ಕುರಿತಂತೆ ಹಕ್ಕುಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಬುಧವಾರ ಹೇಳಿದೆ.. ಏಕೆಂದರೆ, ಇಸ್ಲಾಂ ಧರ್ಮದ ತತ್ವಗಳ ಅಡಿಯಲ್ಲಿ ಅಂತಹ ಸಂಬಂಧವನ್ನು ಅನುಮತಿಸಲಾಗಿಲ್ಲ ಎಂದು ಹೇಳಿದೆ.

ಸಹ ಜೀವನ ಸಂಬಂಧದಲ್ಲಿರುವ ಸ್ನೇಹಾ ದೇವಿ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎ.ಆರ್. ಮಸೂದಿ ಮತ್ತು ಎ.ಕೆ. ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ರೀತಿ ಅಭಿಪ್ರಾಯ ಪಟ್ಟಿದೆ.

ADVERTISEMENT

ತಮ್ಮ ಮಗಳನ್ನು ಖಾನ್ ಅಪಹರಿಸಿದ್ದು, ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಸ್ನೇಹಾ ದೇವಿ ಅವರ ಪೋಷಕರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಕ್ರಮದಿಂದ ರಕ್ಷಣೆ ಕೋರಿ ದಂಪತಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸ್ನೇಹಾ ದೇವಿ ಅವರನ್ನು ಪೋಷಕರ ರಕ್ಷಣೆಗೆ ಒಪ್ಪಿಸಿತು.

ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ರಕ್ಷಣೆ ಕೊಡಬೇಕು. ನಾವಿಬ್ಬರೂ ಪ್ರವರ್ಧಮಾನಕ್ಕೆ ಬಂದಿದ್ದು, ಸಹ ಜೀವನ ನಡೆಸಲು ಮುಕ್ತರು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದ್ದರು.

‘ಇಸ್ಲಾಂ ಧರ್ಮದ ತತ್ವಗಳ ಅಡಿಯಲ್ಲಿ ಸಂಗಾತಿ ಬದುಕಿರುವಾಗಲೇ ಬೇರೊಬ್ಬರ ಜೊತೆ ಸಹ ಜೀವನಕ್ಕೆ ಅವಕಾಶ ಇಲ್ಲ. ಇಬ್ಬರೂ ಮದುವೆ ಆಗದಿದ್ದ ಪಕ್ಷದಲ್ಲಿ ಪ್ರವರ್ಧಮಾನಕ್ಕೆ ಬಂದವರು ಅವರಿಷ್ಟದಂತೆ ಸಹ ಜೀವನ ನಡೆಸಬಹುದು’ ಎಂದು ಹೇಳಿದ ನ್ಯಾಯಪೀಠ, ತಮ್ಮ ಸ್ವಾತಂತ್ರ್ಯ ಮತ್ತು ಜೀವ ರಕ್ಷಣೆಗೆ ಆದೇಶ ಕೋರಿದ್ಧ ಮನವಿಯನ್ನು ತಿರಸ್ಕರಿಸಿದೆ.

2020ರಲ್ಲಿ ಖಾನ್, ಫರಿದಾ ಖಟೂನ್ ಎಂಬ ಮಹಿಳೆಯನ್ನು ವಿವಾಹವಾಗಿದ್ದು, ದಂಪತಿಗೆ ಮಗುವಿದೆ ಎಂದು ತನಿಖೆಯಲ್ಲಿ ತಿಳಿದುಬಂದ ಬಳಿಕ ಪೀಠ ಈ ಆದೇಶ ನೀಡಿದೆ.

ವಿವಾಹದ ವಿಷಯದಲ್ಲಿ ಸಾಂವಿಧಾನಿಕ ನೈತಿಕತೆ ಮತ್ತು ಸಾಮಾಜಿಕ ನೈತಿಕತೆಯು ಸಮತೋಲನದಲ್ಲಿರಬೇಕು ಎಂದು ನ್ಯಾಯಾಲಯವು ಗಮನಿಸಿದೆ. ಅದು ವಿಫಲವಾದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ಉದ್ದೇಶವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.