ADVERTISEMENT

ಮ್ಯಾನ್ಮಾರ್‌ ಸೇನಾ ದಂಗೆ, ತುರ್ತು ಪರಿಸ್ಥಿತಿ: ಕಳವಳ ವ್ಯಕ್ತಪಡಿಸಿದ ಭಾರತ

ಪಿಟಿಐ
Published 1 ಫೆಬ್ರುವರಿ 2021, 10:43 IST
Last Updated 1 ಫೆಬ್ರುವರಿ 2021, 10:43 IST
ಮ್ಯಾನ್ಮಾರ್ ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್ ಸೂಕಿ
ಮ್ಯಾನ್ಮಾರ್ ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್ ಸೂಕಿ   

ನವದೆಹಲಿ: ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ ಮತ್ತು ಉನ್ನತ ರಾಜಕೀಯ ನಾಯಕರನ್ನು ಸೇನೆ ವಶದಲ್ಲಿಟ್ಟುಕೊಂಡಿರುವುದರ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.

ಈ ಕುರಿತು ವಿದೇಶಾಂಗ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದ್ದು, ‘ಮ್ಯಾನ್ಮಾರ್‌ನಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಭಾರತ ಸದಾ ಬೆಂಬಲ ನೀಡುತ್ತದೆ’ ಎಂದು ಉಲ್ಲೇಖಿಸಿದೆ.

‘ನಿಯಮಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿಹಿಡಿಯಬೇಕು’ ಎಂದೂ ಸಚಿವಾಲಯ ಹೇಳಿದೆ.

ಮ್ಯಾನ್ಮಾರ್‌ನಲ್ಲಿ ದಂಗೆಯೆದ್ದಿರುವ ಸೇನೆಯು ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ನಿಯಂತ್ರಣ ಸಾಧಿಸಿದ್ದು, ಒಂದು ವರ್ಷದ ವರೆಗೆ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ಕುರಿತು ಸರ್ಕಾರಿ ದೂರದರ್ಶನದಲ್ಲಿ ಘೋಷಣೆ ಮಾಡಲಾಗಿದೆ. ಮ್ಯಾನ್ಮಾರ್ ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್ ಸೂಕಿಅವರನ್ನು ಸೇನೆಯು ವಶಕ್ಕೆ ಪಡೆದಿದೆ.

ಈ ಕುರಿತು ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಪ್ರತಿಕ್ರಿಯಿಸಿದ್ದು, ಸೂಕಿ ಸೇರಿದಂತೆ ಇತರ ನಾಯಕರ ಬಿಡುಗಡೆಗೆ ಆಗ್ರಹಿಸಿವೆ. ಈ ಮಧ್ಯೆ, ಒಂದು ವರ್ಷದ ತುರ್ತು ಪರಿಸ್ಥಿತಿ ಮುಕ್ತಾಯಗೊಂಡ ಬಳಿಕ ಚುನಾವಣೆ ನಡೆಸುವುದಾಗಿ ಮ್ಯಾನ್ಮಾರ್‌ ಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.