ಬೈಕ್‌ನ ಹಿಂಬಂದಿಗೆ ಪತ್ನಿಯ ಮೃತದೇಹ ಕಟ್ಟಿರುವುದು
– ಎಕ್ಸ್ ಚಿತ್ರ
ನಾಗ್ಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ದೇಹ ಸಾಗಿಸಲು ಯಾರಿಂದಲೂ ಸಹಾಯ ಸಿಗದ ಕಾರಣ, ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಲಾರಿ ಹರಿದು ಮಹಿಳೆ ಮೃತಪಟ್ಟಿದ್ದರು.
ಆಗಸ್ಟ್ 9 ರಂದು ನಾಗ್ಪುರ–ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ದೇಹವನ್ನು ಕಟ್ಟಿ ಸಾಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಬೈಕ್ ಅನ್ನು ತಡೆದು ನಿಲ್ಲಿಸುವ ಮುನ್ನ ಪೊಲೀಸರೇ ಈ ವಿಡಿಯೊ ಚಿತ್ರೀಕರಿಸಿದ್ದಾಗಿ ಗೊತ್ತಾಗಿದೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಅಮಿತ್ ಯಾದವ್, ತಮ್ಮ ಪತ್ನಿ ಗ್ಯಾರ್ಸಿಯವರೊಂದಿಗೆ ನಾಗ್ಪುರದ ಲೊನಾರಾದಿಂದ ಮಧ್ಯಪ್ರದೇಶದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ಗ್ಯಾರ್ಸಿಯ ಮೇಲೆ ಟ್ರಕ್ ಹರಿದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಸಹಾಯಕ್ಕೆಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಬರದೇ ಇದ್ದಾಗ, ವಿಧಿಯಿಲ್ಲದೆ ಮೃತದೇಹವನ್ನು ತಮ್ಮ ಬೈಕ್‌ಗೆ ಕಟ್ಟಿ ಊರಿನತ್ತ ಹೊರಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೈಕ್ ಅನ್ನು ತಡೆದು ನಿಲ್ಲಿಸಿದ ಪೊಲೀಸರು ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರದ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ.
ಹೆಂಡತಿಯ ಮೃತದೇಹವನ್ನು ಬೈಕಿನ ಹಿಂಬದಿಯ ಸೀಟಿಗೆ ಕಟ್ಟಿ ಹಾಕಿ, ಸಾಗಿಸುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.