ADVERTISEMENT

ಅಣ್ಣಾಮಲೈ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು: ನೈನಾರ್ ನಾಗೇಂದ್ರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2023, 5:30 IST
Last Updated 19 ಮಾರ್ಚ್ 2023, 5:30 IST
ಅಣ್ಣಾಮಲೈ
ಅಣ್ಣಾಮಲೈ    

ಚೆನ್ನೈ: ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಮುಂದುವರಿಸಲು ಪಕ್ಷದ ಕೇಂದ್ರ ನಾಯಕರು ನಿರ್ಧರಿಸಿದ್ದೇ ಆದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.ಅಣ್ಣಾಮಲೈ ಹೇಳಿದ್ದಾರೆ ಎನ್ನಲಾಗಿತ್ತು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಅವರು, ಅಣ್ಣಾಮಲೈ ರಾಜೀನಾಮೆ ನೀಡುತ್ತಾರೆ ಎನ್ನುವ ವರದಿಯನ್ನು ಅಲ್ಲಗೆಳದಿದ್ದಾರೆ.

ಚೆನ್ನೈನಲ್ಲಿ ಶುಕ್ರವಾರ ನಡೆದ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ. ಮೈತ್ರಿ ಬೇಡ ಎನ್ನುವುದು ಅಣ್ಣಾಮಲೈ ಅವರ ವೈಯಕ್ತಿಕ ಅಭಿಪ್ರಾಯ ಆಗಿರಬಹುದು. ಆದರೆ, ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದಿದ್ದಾರೆ.

ADVERTISEMENT

ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ವರದಿ ಮಾಡಿದೆ. ಇನ್ನೊಂದೆಡೆ, ಶಾಸಕಿ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ ವನತಿ ಶ್ರೀನಿವಾಸನ್‌ ಅವರು ಮೈತ್ರಿ ಸಂಬಂಧ ಅಣ್ಣಾಮಲೈ ಜೊತೆ ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ.

ಅಣ್ಣಾಮಲೈ ವಿರೋಧ: ವರದಿ

ಎಐಎಡಿಎಂಕೆ ಜೊತೆ ಬಿಜೆಪಿಯು ಮೈತ್ರಿ ಮುಂದುವರಿಸುವುದಕ್ಕೆ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿತ್ತು.

‘ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳೂ ಸೇರಿದಂತೆ ಪಕ್ಷವು ಏಕಾಂಗಿಯಾಗಿಯೇ ಸ್ಪರ್ಧಿಸಬೇಕು. ರಾಜ್ಯದಲ್ಲಿರುವ ದ್ರಾವಿಡ ಪಕ್ಷಗಳಿಗೆ ಪರ್ಯಾಯ ಪಕ್ಷವಾಗಿ ಹೊರಹೊಮ್ಮಬೇಕು ಎಂಬ ಬಗ್ಗೆ ಬಿಜೆಪಿ ಗಂಭೀರವಾಗಿದ್ದಲ್ಲಿ ಇಂಥ ನಡೆ ಅಗತ್ಯ’ ಎಂಬುದಾಗಿ ಅಣ್ಣಾಮಲೈ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿತ್ತು.

ಅಣ್ಣಾಮಲೈ ಅವರ ಈ ಮಾತುಗಳಿಗೆ ಕೆಲ ಮುಖಂಡರಿಂದ ತೀವ್ರ ವಿರೋಧ ವ್ಯಕ್ತ ವಾಯಿತು. ಸಭೆಯಲ್ಲಿದ್ದವರ ಪೈಕಿ ಕನಿಷ್ಠ ಇಬ್ಬರು ಮುಖಂಡರು, ‘ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ಕುರಿತು ಮಾತನಾಡುವ ಅಗತ್ಯವಿದೆಯೇ? ಇಂಥ ವಿಷಯಗಳ ಕುರಿತು ಬಿಜೆಪಿ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂಬುದಾಗಿ ಹೇಳಿದರು’ ಎನ್ನಲಾಗಿದೆ.

ಸಭೆಯಲ್ಲಿದ್ದ ಕೆಲ ಪದಾಧಿಕಾರಿಗಳು ಅಣ್ಣಾಮಲೈ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಸ್ಪರ್ಧಿಸಬೇಕು ಎಂದು ಹೇಳಿದ್ದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.