ADVERTISEMENT

ನಮಾಜ್‌ ಮಾಡುವುದು ಬಲ ಪ್ರದರ್ಶನ ಆಗಬಾರದು: ಹರಿಯಾಣ ಸಿಎಂ ಖಟ್ಟರ್‌

ಪಿಟಿಐ
Published 31 ಡಿಸೆಂಬರ್ 2021, 6:47 IST
Last Updated 31 ಡಿಸೆಂಬರ್ 2021, 6:47 IST
ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌
ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌   

ನವದೆಹಲಿ: ನಮಾಜ್‌ ಮಾಡುವುದು ಬಲ ಪ್ರದರ್ಶನ ಆಗಬಾರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಪಟೌದಿಯಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಅಡ್ಡಿ ಪಡಿಸಿರುವುದು 'ದುರದೃಷ್ಟಕರ' ಘಟನೆ ಎಂದಿದ್ದಾರೆ.

ಗುರುಗ್ರಾಮದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲೀಮರು ಪ್ರಾರ್ಥನೆ (ನಮಾಜ್‌) ಮಾಡುವುದಕ್ಕೆ ಹಿಂದೂ ಸಂಘಟನೆಗಳು ಅಡ್ಡಿ ಪಡಿಸಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಖಟ್ಟರ್‌ ಅವರು ಗುರುವಾರ ಈ ಹೇಳಿಕೆ ನೀಡಿದ್ದಾರೆ.

'ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದು ಸರಿಯಾದುದಲ್ಲ. ನಮಾಜ್‌ ಮಾಡುವುದು ನಮಾಜ್‌ ಆಗಿ ಇರಬೇಕೆ ಹೊರತು ಬಲ ಪ್ರದರ್ಶನದಂತೆ ಆಗಬಾರದು' ಎಂದು ಖಟ್ಟರ್‌ ಹೇಳಿದ್ದಾರೆ.

ADVERTISEMENT

'ಎಲ್ಲ ಜನರೂ ಪೂಜೆ ಸಲ್ಲಿಸಲು ಮತ್ತು ಪ್ರಾರ್ಥನೆ ಮಾಡಲು ಸ್ವತಂತ್ರರು, ಆದರೆ ಅದು ನಿರ್ದಿಷ್ಟ ಸ್ಥಳದಲ್ಲಿ ನಡೆಯಬೇಕು. ಆ ಬಗ್ಗೆ ಯಾವುದೇ ತಾರತಮ್ಯತೆ ಎದುರಾದರೆ, ಬೇರೆ ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಜನರು ಸ್ಥಳೀಯ ಆಡಳಿತವನ್ನು ಮಧ್ಯ ಪ್ರವೇಶಿಸುವಂತೆ ಕೋರಬಹುದು' ಎಂದು ವಿವರಿಸಿದ್ದಾರೆ.

ಕೆಲವು ಬಲಪಂಥೀಯ ಯುವಕರು ಪಟೌದಿಯಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಅಡ್ಡಿ ಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಅದೊಂದು ದುರದೃಷ್ಟಕರ ಘಟನೆ. ಅಂಥ ಘಟನೆಗಳನ್ನು ಬೆಂಬಲಿಸುವ ಯಾವುದೇ ಕಾರಣಗಳಿಲ್ಲ. ಆ ರೀತಿಯ ಯಾವುದೇ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುವುದು ಸರಿಯಾದುದಲ್ಲ' ಎಂದಿದ್ದಾರೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ, 'ಯಾರು ಪ್ರತಿಭಟನೆಯನ್ನು ಶುರು ಮಾಡಿದರು ಹಾಗೂ ಯಾರು ಅದಕ್ಕೆ ಬೆಂಬಲಿಸಿದರು ಎಂಬುದನ್ನು ಬೇರ್ಪಡಿಸಿ ಕಾಣಬೇಕಿದೆ. ಏಕೆಂದರೆ, ಅಲ್ಲಿ ರಾಜಕೀಯ ಉದ್ದೇಶಗಳನ್ನು ಹೊಂದಿದ್ದ ಜನರು ಇದ್ದರು. ಪ್ರತಿಭಟನೆಗಳನ್ನು ಶುರು ಮಾಡಿದವರು ತಮಗೆ ತಾವು 'ರೈತ ಮುಖಂಡ' ಎಂದು ಕರೆದು ಕೊಂಡರು,' ಎಂದು ಖಟ್ಟರ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.