ಕೋಲ್ಕತ್ತ: ‘ನಾರದ ಮಾರುವೇಷದ ಕಾರ್ಯಾಚರಣೆ ಪ್ರಕರಣ ಸಂಬಂಧ ಬಂಧಕ್ಕೊಳಗಾದ ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಟಿಎಂಸಿ ಮಾಜಿ ನಾಯಕ ಸೋವನ್ ಚಟರ್ಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರಿಬ್ಬರನ್ನು ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ನಾರದ ಮಾರುವೇಷದ ಕಾರ್ಯಾಚರಣೆ ಪ್ರಕರಣ ಸಂಬಂಧ ಮಿತ್ರಾ, ಚಟರ್ಜಿ ಮತ್ತು ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರನ್ನು ಸೋಮವಾರ ಬೆಳಿಗ್ಗೆ ಸಿಬಿಐ ಬಂಧಿಸಿತ್ತು. ಬಳಿಕ ಸೋಮವಾರ ರಾತ್ರಿ ನಾಲ್ಕು ಮಂದಿಯನ್ನು ಕೋಲ್ಕತ್ತದ ಪ್ರೆಸಿಡೆನ್ಸಿ ಜೈಲಿಗೆ ಕರೆದೊಯ್ಯಲಾಯಿತು.
‘ಮಂಗಳವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ಮದನ್ ಮತ್ತು ಚಟರ್ಜಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಅವರು ಹೇಳಿದರು.
‘ಇಬ್ಬರು ನಾಯಕರಿಗೆ ಆಮ್ಲಜನಕದ ನೆರವನ್ನು ನೀಡಲಾಗಿತ್ತು. ಈಗ ಅವರಿಬ್ಬರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಆಸ್ಪತ್ರೆ ತಿಳಿಸಿದೆ.
‘ಸುಬ್ರತಾ ಮುಖರ್ಜಿ ಅವರ ಆರೋಗ್ಯವು ಹದಗೆಟ್ಟಿತ್ತು. ಅವರನ್ನು ಕೂಡ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಲ್ಲಾ ಪರಿಶೀಲನೆ ಬಳಿಕ ಜೈಲಿಗೆ ವಾಪಸ್ ಕರೆತರಲಾಯಿತು. ಫಿರ್ಹಾದ್ ಹಕೀಮ್ ಅವರು ಆರೋಗ್ಯವಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.