ADVERTISEMENT

ನರವಣೆ ಆತ್ಮಚರಿತ್ರೆ ವಿವಾದ: ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾಗೆ ನೋಟಿಸ್

ಪಿಟಿಐ
Published 11 ಫೆಬ್ರುವರಿ 2026, 11:46 IST
Last Updated 11 ಫೆಬ್ರುವರಿ 2026, 11:46 IST
   

ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಕೆಲ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ದೆಹಲಿ ಪೊಲೀಸರ ವಿಶೇಷ ಘಟಕವು, ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾಕ್ಕೆ ಬುಧವಾರ ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರವಣೆ ಅವರ ‘ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿ’ಯಲ್ಲಿ (ಅಪ್ರಕಟಿತ) ಪುಸ್ತಕದ ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.

ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್‌ನಲ್ಲಿ ನಡೆದ ಸೇನಾ ತಿಕ್ಕಾಟದ ಬಗ್ಗೆ, ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು ಭಾರಿ ಗದ್ದಲ ಎಬ್ಬಿಸಿತ್ತು.

ADVERTISEMENT

ದೆಹಲಿ ಪೊಲೀಸ್ ವಿಶೇಷ ಘಟಕವು, ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾಕ್ಕೆ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರತಿಕ್ರಿಯೆ ಕೋರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಧಿಕೃತ ಪ್ರಸರಣದ ಆರೋಪದಡಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದೂ ಅವರು ಹೇಳಿದ್ದಾರೆ.

2020ರ ಮೇ 5ರಂದು ‘ಪಾಂಗಾಂಗ್‌’ ಸರೋವರ ಪ್ರದೇಶದಲ್ಲಿ ಭಾರತ– ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ಜನರಲ್‌ ನರವಣೆ ಅವರು ತಮ್ಮ ಆತ್ಮಚರಿತ್ರೆ ‘ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿ’ಯಲ್ಲಿ (ಅಪ್ರಕಟಿತ) ಈ ಕುರಿತು ಉಲ್ಲೇಖಿಸಿದ್ದಾರೆ. ಈ ಪುಸ್ತಕದ ಕುರಿತ ಒಂದು ಲೇಖನವು ಪ್ರಸಿದ್ಧ ನಿಯತಕಾಲಿಕಯಲ್ಲಿ (ದಿ ಕ್ಯಾರವಾನ್‌) ಪ್ರಕಟವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜನಾಥ ಸಿಂಗ್‌, ಲೋಕಸಭೆಯ ವಿರೋಧ ಪಕ್ಷದ ನಾಯಕರು ತಾವು ಪ್ರಸ್ತಾಪಿಸುತ್ತಿರುವ ಪುಸ್ತಕವನ್ನು ಸದನದ ಮುಂದಿಡಬೇಕು ಎಂದು ನಾನು ಬಯಸುತ್ತೇನೆ. ಆದರೆ ಅದು ಸಾಧ್ಯವಿಲ್ಲ, ಏಕೆಂದರೆ ಆ ಪುಸ್ತಕ ಇನ್ನೂ ಪ್ರಕಟವೇ ಆಗಿಲ್ಲ’ ಎಂದು ಹೇಳಿದ್ದರು.

ಸ್ಪಷ್ಟನೆ ನೀಡಿದ್ದ ರ್‍ಯಾಂಡಮ್ ಹೌಸ್ ಇಂಡಿಯಾ

'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯ ಪ್ರಕಾಶನ ಹಕ್ಕುಗಳನ್ನು ಹೊಂದಿರುವುದಾಗಿ ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದೆ. ಈ ಪುಸ್ತಕ ಪ್ರಕಟಣೆಗೆ ಬಂದಿಲ್ಲ. ಮುದ್ರಿತ ಅಥವಾ ಡಿಜಿಟಲ್ ಪ್ರತಿಗಳನ್ನು ಪ್ರಕಟಣೆ, ವಿತರಣೆ, ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.