ADVERTISEMENT

ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ: ನಡ್ಡಾ

ಪಿಟಿಐ
Published 24 ಆಗಸ್ಟ್ 2021, 12:42 IST
Last Updated 24 ಆಗಸ್ಟ್ 2021, 12:42 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ    

ನವದೆಹಲಿ: ಕೇಂದ್ರ ಸಚಿವ ನಾರಾಯಣ ರಾಣೆ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ, ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇದು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ. ಬಿಜೆಪಿ ಇಂತಹ ಕ್ರಮಗಳಿಂದ ಧೃತಿಗೆಡುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಟ್ವೀಟ್ ಮಾಡಿರುವ ನಡ್ಡಾ 'ಜನ ಆಶೀರ್ವಾದ ಯಾತ್ರೆ'ಯಲ್ಲಿ ಬಿಜೆಪಿ ಪಡೆಯುತ್ತಿರುವ ಅದ್ಭುತ ಸ್ಪಂದನೆಯು ಎದುರಾಳಿಗಳನ್ನು ತಲ್ಲಣಗೊಳಿಸಿದೆ. ನಾವು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತೇವೆ. ಯಾತ್ರೆ ಮುಂದುವರಿಯುತ್ತದೆ’ ಎಂದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ರತ್ನಗಿರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಜೆಪಿಯ ಜನಾಶೀರ್ವಾದ ಸಮಾರಂಭದಲ್ಲಿ ಭೋಜನ ಸೇವಿಸುತ್ತಿದ್ದಾಗಲೇ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಮುಖ್ಯಮಂತ್ರಿಯವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷ ತಿಳಿಯದಿರುವುದು ಅವಮಾನಕರ ವಿಷಯ, ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ರಾಣೆ ಹೇಳಿದ್ದರು.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.