ADVERTISEMENT

ಬಿಹಾರದ ಒಂದೇ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೇ ಮೋದಿ, ಸೋನಿಯಾ, ಶಾ?

ಪಿಟಿಐ
Published 7 ಡಿಸೆಂಬರ್ 2021, 11:03 IST
Last Updated 7 ಡಿಸೆಂಬರ್ 2021, 11:03 IST
ಗೃಹ ಸಚಿವ ಅಮಿತ್ ಶಾ- ಪ್ರಧಾನಿ ನರೇಂದ್ರ ಮೋದಿ
ಗೃಹ ಸಚಿವ ಅಮಿತ್ ಶಾ- ಪ್ರಧಾನಿ ನರೇಂದ್ರ ಮೋದಿ   

ಪಟ್ನಾ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಬಿಹಾರದ ಅರವಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇವರೆಲ್ಲ ಬಿಹಾರಕ್ಕೆ ಹೋಗಿಯೇ ಲಸಿಕೆ ಹಾಕಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ ಅದು ಸುಳ್ಳು. ದಕ್ಷಿಣ ಬಿಹಾರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಾದ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದವರ ಪಟ್ಟಿಯಲ್ಲಿ ಗಣ್ಯರು ಸೇರಿದಂತೆ ಹಲವರ ಹೆಸರುಗಳಿವೆ. ಇವರೆಲ್ಲರೂ ಮಾವೋವಾದಿ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶವಾದ ಅರವಲ್ ಜಿಲ್ಲೆಯ ಪುರನ್ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ.

'ಸಿವಿಲ್ ಸರ್ಜನ್ ದಾಖಲೆಗಳನ್ನು ಪರಿಶೀಲಿಸಿದಾಗ ಈ ಮುಜುಗರದ ಸಂಗತಿ ಕಳೆದ 20 ದಿನಗಳ ಹಿಂದೆಯೇ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಇಬ್ಬರು ಡೇಟಾ ಎಂಟ್ರಿ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ' ಎಂದು ಅರವಲ್ ಜಿಲ್ಲಾಧಿಕಾರಿ ಜೆ. ಪ್ರಿಯದರ್ಶಿನಿ ತಿಳಿಸಿದ್ದಾರೆ.

ADVERTISEMENT

'ಬಿಹಾರದ ಇತರೆ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಪರೀಕ್ಷೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸುವಂತೆ ಆದೇಶಿಸಲಾಗಿದೆ. ಈ ರೀತಿಯ ನಿರ್ಲಕ್ಷ್ಯ ವಹಿಸಿದ್ದಕ್ಕೆ ತನಿಖೆಗೆ ಆದೇಶಿಸಲಾಗಿದೆ. ವಿಚಾರ ಗಮನಕ್ಕೆ ಬಂದ ಕೂಡಲೇ ಇಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

ಡೇಟಾ ಎಂಟ್ರಿ ಆಪರೇಟರ್ ವಿನಯ್ ಕುಮಾರ್ ಮಾತನಾಡಿ, 'ಯಾವುದೇ ಹೆಸರು ಮತ್ತು ವಿಳಾಸವಿಲ್ಲದಿದ್ದರೂ ಫಲಾನುಭವಿಗಳ ಹೆಸರನ್ನು ನಮೂದಿಸುವಂತೆ ಆರೋಗ್ಯಾಧಿಕಾರಿ ಮತ್ತು ಇತರರಿಂದ ಒತ್ತಡಕ್ಕೆ ಒಳಗಾಗಿದ್ದೆ. ಹೀಗಾಗಿಯೇ ಆರೋಗ್ಯಾಧಿಕಾರಿಯ ಆದೇಶದ ಮೇರೆಗೆ ಹೆಸರುಗಳನ್ನು ಸೇರಿಸಲಾಗಿದೆ' ಎಂದಿದ್ದಾರೆ.

'ಫಲಾನುಭವಿಗಳ ಪಟ್ಟಿಯಲ್ಲಿ ದಾಖಲಾಗಿರುವಂತೆ ಪುರನ್ ಮತ್ತು ಹೊರ್ಹಾ ಗ್ರಾಮಗಳಲ್ಲಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಎನ್ನುವ ಯಾವುದೇ ಹೆಸರಿರುವವರು ಪತ್ತೆಯಾಗಿಲ್ಲ' ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಈ ಕುರಿತಾದ ಸ್ಕ್ರೀನ್ ಶಾಟ್‌ಗಳನ್ನು ಶೇರ್ ಮಾಡಿದ್ದು, 'ಬಿಹಾರದ ಆರೋಗ್ಯ ಇಲಾಖೆಯು ಹೇಗೆ ಭ್ರಷ್ಟ ಮತ್ತು ಅಸಮರ್ಥವಾಗಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.