ADVERTISEMENT

ಬಿಜೆಪಿ ಸಂಸದರ ಕಾರ್ಯಾಗಾರಕ್ಕೆ ಭೇಟಿ ನೀಡಿದ ಮೋದಿ: ಸಂಸದರ ಮಧ್ಯೆ ಕುಳಿತ ಪ್ರಧಾನಿ

ಪಿಟಿಐ
Published 7 ಸೆಪ್ಟೆಂಬರ್ 2025, 13:52 IST
Last Updated 7 ಸೆಪ್ಟೆಂಬರ್ 2025, 13:52 IST
   

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಸಂಸದರಿಗಾಗಿ ಬಿಜೆಪಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಭಾಗವಹಿಸಿದ್ದರು. ಈ ವೇಳೆ ಅವರು ಕೊನೆಯ ಸಾಲಿನಲ್ಲಿ ಸಾಮಾನ್ಯರಂತೆ ಕುಳಿತಿದ್ದರು ಎಂದು ಸಂಸದರು ಹೇಳಿದರು. 

ಮೋದಿ ಅವರು ಭಾಗಿಯಾಗಿದ್ದ ಫೋಟೊವನ್ನು ಸಂಸದ ರವಿ ಕಿಶನ್‌ ಹಂಚಿಕೊಂಡಿದ್ದಾರೆ. ‘ಪ್ರಧಾನಿ ಮೋದಿ ಅವರು ಕಾರ್ಯಾಗಾರದಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿರುವುದು ಬಿಜೆಪಿಯ ಶಕ್ತಿಯನ್ನು ಬಿಂಬಿಸುತ್ತದೆ. ಪ್ರತಿ ಕಾರ್ಯಕರ್ತನೂ ಬಿಜೆಪಿ ಭಾಗವಾಗಿರುತ್ತಾನೆ’ ಎಂದು ಅವರು ಬರೆದುಕೊಂಡಿದ್ದಾರೆ. 

ಸಂಸತ್ತಿನ ಸಂಕೀರ್ಣದಲ್ಲಿರುವ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಪಕ್ಷದ ಇತಿಹಾಸ, ಬೆಳವಣಿಗೆ ಸೇರಿದಂತೆ ಸಂಸದರ ದಕ್ಷತೆ ಹೆಚ್ಚಿಸಲು ಅಗತ್ಯವಿರುವ ಸಲಹೆಗಳನ್ನು ನೀಡಲಾಯಿತು. 

ADVERTISEMENT

ಸರಕು ಮತ್ತು ಸೇವಾ ತೆರಿಗೆಯಲ್ಲಿನ (ಜಿಎಸ್‌ಟಿ) ಇತ್ತೀಚಿನ ಸುಧಾರಣೆಗಳನ್ನು ಸಂಸದರು ಶ್ಲಾಘಿಸಿದರು. 

‘2027ಕ್ಕೆ ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ’ ಹಾಗೂ ‘ಸಂಸದರಿಂದ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ’ ಎಂಬ ವಿಷಯಗಳ ಕುರಿತು ಕಾರ್ಯಾಗಾರದ ಮೊದಲ ದಿನ (ಭಾನುವಾರ) ಚರ್ಚಿಸಲಾಯಿತು. 

ಕೃಷಿ, ರಕ್ಷಣೆ, ಶಿಕ್ಷಣ, ರೈಲ್ವೆ ಮತ್ತು ಸಾರಿಗೆ ಸೇರಿದಂತೆ ಅನೇಕ ಕ್ಷೇತ್ರಗಳ ಕುರಿತೂ ಸಂಸದರು ಚರ್ಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.