ADVERTISEMENT

ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್‌ ಸಂಸತ್ತಿನಲ್ಲಿ PM ಮೋದಿ

ಪಿಟಿಐ
Published 25 ಫೆಬ್ರುವರಿ 2026, 18:28 IST
Last Updated 25 ಫೆಬ್ರುವರಿ 2026, 18:28 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಬೆನ್‌ ಗುರಿಯನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು</p></div>

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಬೆನ್‌ ಗುರಿಯನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು

   

  ಪಿಟಿಐ ಚಿತ್ರ

ಜೆರುಸಲೇಂ: ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ADVERTISEMENT

ಇಸ್ರೇಲ್‌ ಸಂಸತ್ತು ‘ಕೆನೆಸೆಟ್’ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ಭಯೋತ್ಪಾದನೆಯು ವಿಶ್ವದೆಲ್ಲೆಡೆ ಶಾಂತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಭಾರತವು ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ’ ಎಂದು ಹೇಳಿದರು. 

‘ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲ್‌ ನಾಗರಿಕರು ಸೇರಿದಂತೆ ಅಮಾಯಕರು ಬಲಿಯಾದ ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಇಸ್ರೇಲ್‌ನಂತೆಯೇ, ಭಾರತವೂ ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ಈ ವಿಷಯದಲ್ಲಿ ಇಬ್ಬಗೆ ನೀತಿಗೆ ಅವಕಾಶವಿಲ್ಲ’ ಎಂದರು.

‘ಕಳೆದ ಕೆಲವು ವರ್ಷಗಳಿಂದ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಅದೇ ಸಮಯದಲ್ಲಿ, ಇಸ್ರೇಲ್ ನಾವೀನ್ಯತೆ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಶಕ್ತಿಯಾಗಿದೆ. ಇದು ನಮ್ಮ ಭವಿಷ್ಯದ ಪಾಲುದಾರಿಕೆಗೆ ಭದ್ರ ತಳಹದಿ ಸೃಷ್ಟಿಸುತ್ತದೆ’ ಎಂದು ತಿಳಿಸಿದರು.

ಭಾಷಣದ ಬಳಿಕ ಇಸ್ರೇಲ್‌ ಸಂಸತ್ತು ಮೋದಿ ಅವರಿಗೆ ‘ಸ್ಪೀಕರ್‌ ಆಫ್‌ ದಿ ಕೆನೆಸೆಟ್‌’ ಪದಕ ಪ್ರದಾನ ಮಾಡಿತು.

ಆತ್ಮೀಯ ಸ್ವಾಗತ: ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ ಮೋದಿ ಅವರನ್ನು ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಬೆನ್‌ ಗುರಿಯನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಆ ಬಳಿಕ ಇಬ್ಬರೂ ನಾಯಕರು ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಸಭೆ ನಡೆಸಿದರು.

‘ಪ್ರಧಾನಿ ನೆತನ್ಯಾಹು ಅವರೊಂದಿಗೆ ರಚನಾತ್ಮಕ ಸಭೆ ನಡೆಯಿತು. ನನಗೆ ಆತ್ಮೀಯ ಸ್ವಾಗತ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ಒಂಬತ್ತು ವರ್ಷಗಳ ನಂತರ ಇಸ್ರೇಲ್‌ಗೆ ಮರಳಿರುವುದು ಸಂತೋಷ ತಂದಿದೆ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ದ್ವಿಪಕ್ಷೀಯ ಸಂಬಂಧ ಹೆಚ್ಚಿಸುವ ಗುರಿಯೊಂದಿಗೆ ಹಲವು ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ. ತಂತ್ರಜ್ಞಾನ, ಜಲ ನಿರ್ವಹಣೆ ಮತ್ತು ಕೃಷಿ ಹಾಗೂ ಇತರ ಕ್ಷೇತ್ರಗಳಲ್ಲಿ ನಿಕಟ ಸಹಯೋಗಕ್ಕೆ ಅಪಾರ ಅವಕಾಶಗಳಿವೆ. ಈ ಪ್ರದೇಶದ ಪ್ರಮುಖ ಬೆಳವಣಿಗೆಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ’ ಎಂದು ಹೇಳಿದ್ದಾರೆ. 

‘ನಾನು ಮತ್ತು ಪತ್ನಿ ಸಾರಾ ನಮ್ಮ ಆತ್ಮೀಯ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದೆವು. ಅವರು ಮತ್ತೊಂದು ಐತಿಹಾಸಿಕ ಭೇಟಿಗಾಗಿ ಇಸ್ರೇಲ್‌ಗೆ ಆಗಮಿಸಿದ್ದಾರೆ’ ಎಂದು ನೆತನ್ಯಾಹು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಮೋದಿ ಅವರೊಂದಿಗೆ ನಿಕಟ ವೈಯಕ್ತಿಕ ಸಂಬಂಧ ಹೊಂದಿದ್ದೇನೆ. ನಾವು ಆಗಾಗ್ಗೆ ಮಾತನಾಡುತ್ತೇವೆ ಮತ್ತು ನಮ್ಮ ನಡುವಿನ ಸ್ನೇಹವು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಪ್ರತಿಬಿಂಬಿಸುವುದಾಗಿ ನಂಬುತ್ತೇನೆ ಎಂದಿದ್ದಾರೆ.

ಮೋದಿ ಅವರು 2017ರ ಜುಲೈನಲ್ಲಿ ಇಸ್ರೇಲ್‌ಗೆ ಮೊದಲ ಬಾರಿ ಭೇಟಿ ನೀಡಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ನಡುವೆಯೇ ಪ್ರಧಾನಿ ಅವರು ಇಸ್ರೇಲ್‌ ಭೇಟಿ ಕೈಗೊಂಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ರಕ್ಷಣಾ ಸಹಕಾರವು ಈಚೆಗಿನ ವರ್ಷಗಳಲ್ಲಿ ಎರಡೂ ದೇಶಗಳ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭ ಎನಿಸಿಕೊಂಡಿದೆ. ಭಾರತಕ್ಕೆ ಹಲವು ರೀತಿಯ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಪೂರೈಸುತ್ತಿದೆ. ಕಳೆದ ನವೆಂಬರ್‌ನಲ್ಲಿ ಭಾರತದ ರಕ್ಷಣಾ ಕಾರ್ಯದರ್ಶಿ ಇಸ್ರೇಲ್‌ಗೆ ಭೇಟಿ ನೀಡಿದ್ದರಲ್ಲದೆ,  ರಕ್ಷಣಾ ಸಹಕಾರದ ಕುರಿತು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.