ADVERTISEMENT

ನಿರುದ್ಯೋಗ, ಬೆಲೆಯೇರಿಕೆ ಮೋದಿ ಸರ್ಕಾರದ ಇಬ್ಬರು ಸಹೋದರರು: ಕಾಂಗ್ರೆಸ್‌ ಲೇವಡಿ

ಪಿಟಿಐ
Published 4 ಸೆಪ್ಟೆಂಬರ್ 2022, 8:09 IST
Last Updated 4 ಸೆಪ್ಟೆಂಬರ್ 2022, 8:09 IST
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ | ಪಿಟಿಐ ಚಿತ್ರ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ | ಪಿಟಿಐ ಚಿತ್ರ   

ನವದೆಹಲಿ: ನಿರುದ್ಯೋಗ ಮತ್ತು ಬೆಲೆಯೇರಿಕೆ, ಮೋದಿ ಸರ್ಕಾರದ ಇಬ್ಬರು ಸಹೋದರರು ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ 'ಮೆಹಂಗಾಯಿ ಪರ್‌ ಹಲ್ಲಾ ಬೋಲ್‌' ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಇದು 2024ರ ಚುನಾವಣೆ ನಿಟ್ಟಿನಲ್ಲಿ ನಡೆಸುತ್ತಿರುವ ರ‍್ಯಾಲಿಯಲ್ಲ ಎಂದು ಸ್ಪಷ್ಟಪಡಿಸಿದರು.

ರ‍್ಯಾಲಿಯ ಉದ್ದೇಶ ರಾಷ್ಟ್ರದ ಅತಿ ದೊಡ್ಡ ಸವಾಲುಗಳಾಗಿ ಪರಿಣಮಿಸಿರುವ ನಿರುದ್ಯೋಗ ಮತ್ತು ಬೆಲೆಯೇರಿಕೆ ವಿರುದ್ಧವಾಗಿದೆ. ಆ.5ರಂದು ಪ್ರತಿಭಟನೆ ನಡೆಸಿದ್ದೆವು. ರಾಹುಲ್‌ ಗಾಂಧಿ ಅವರನ್ನು ಸೇರಿ ಸುಮಾರು 70 ಸಂಸದರನ್ನು ಬಂಧಿಸಲಾಯಿತು. ಜನರ ದಾರಿ ತಪ್ಪಿಸಲು ಪ್ರತಿಭಟನೆಗೆ ಇಳಿದಿದ್ದೇವೆ ಎಂದು ಬಿಜೆಪಿ ಆಪಾದಿಸುತ್ತಿದೆ. ನಾವೇನು ಇದ್ದಕ್ಕಿದ್ದಂತೆ ಪ್ರತಿಭಟನೆಗೆ ಇಳಿದಿಲ್ಲ. ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. 12-13 ರಾಜ್ಯಗಳಿಂದ ಬರುತ್ತಿದ್ದಾರೆ. ಸೂಕ್ಷ್ಮಗ್ರಾಹಿಯಲ್ಲದ ಮೋದಿ ಸರ್ಕಾರಕ್ಕೆ ಪರಿಣಾಮಕಾರಿ ಸಂದೇಶವನ್ನು ತಲುಪಿಸಬೇಕಿದೆ. ರಾಷ್ಟ್ರದ ಜನರ ಸಂಕಷ್ಟದ ಪರ ನಿಲ್ಲಬೇಕಿದೆ. ನಿರುದ್ಯೋಗ ಮತ್ತು ಬೆಲೆಯೇರಿಕೆ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದು ಜೈರಾಮ್‌ ರಮೇಶ್‌ ಹೇಳಿದರು.

ADVERTISEMENT

ಗುಲಾಂ ನಬಿ ಆಜಾದ್‌ ಅವರು ಕಾಂಗ್ರೆಸ್‌ ತೊರೆದ ಬಗೆಗಿನ ಪ್ರಶ್ನೆಗೆ ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಹೋರಾಟದ ಬಗ್ಗೆಯಷ್ಟೇ ಮಾತನಾಡುತ್ತೇನೆ. ಬಿಜೆಪಿ ಕುರಿತು ಮಾತನಾಡುವುದಿಲ್ಲ ಎಂದರು.

ಸೆಪ್ಟೆಂಬರ್‌ 7ರಿಂದ ಭಾರತವನ್ನು ಜೋಡಿಸಿ ಅಭಿಯಾನ ಆರಂಭಗೊಳ್ಳಲಿದೆ. ಅದರಲ್ಲಿ ರಾಷ್ಟ್ರ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಆರ್ಥಿಕತೆ ಕುಸಿತದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ರಮೇಶ್‌ ಹೇಳಿದರು.

ಮೋದಿ ಸರ್ಕಾರಕ್ಕೆ ನಿರುದ್ಯೋಗ ಮತ್ತು ಬೆಲೆಯೇರಿಕೆ ಎಂಬ ಇಬ್ಬರು ಸಹೋದರರಿದ್ದಾರೆ. ಮೋದಿ ಸರ್ಕಾರಕ್ಕೆ ಇ.ಡಿ ಮತ್ತು ಸಿಬಿಐ ಎಂಬ ಇನ್ನಿಬ್ಬರು ಸಹೋದರರು ಇದ್ದಾರೆ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.