ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ಅಧಿಕಾರಾವಧಿಯಲ್ಲಿ 33 ತಪ್ಪುಗಳು ನಡೆದಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ‘ಸುಳ್ಳು ಹೇಳುವುದು’, ‘ಯುವಕರನ್ನು ವಂಚಿಸುವುದು’, ‘ಬಡವರನ್ನು ದಾರಿ ತಪ್ಪಿಸಿ ಮತ ಗಳಿಸುವುದು’... ಹೀಗೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 33 ತಪ್ಪುಗಳನ್ನು ಮಾಡಿದೆ. ಈ ರೀತಿ ಮೋಸಗೊಳಿಸುವ ಪ್ರಧಾನಿಯನ್ನು ನಾನು ಎಂದೂ ನೋಡಿಲ್ಲ’ ಎಂದು ಕಿಡಿಕಾರಿದ್ದಾರೆ.
‘ನನ್ನ 65 ವರ್ಷಗಳ ರಾಜಕೀಯ ಮತ್ತು 55 ವರ್ಷಗಳ ಅಧಿಕಾರದಲ್ಲಿ ಅವರಂತಹ ಪ್ರಧಾನಿಯನ್ನು ಭೇಟಿಯಾಗಿಲ್ಲ. ಅವರು (ಮೋದಿ) ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ, ಕ್ಷಮೆ ಸಹ ಯಾಚಿಸುವುದಿಲ್ಲ’ ಎಂದು ಟೀಕಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇ.ಡಿ ಅಧಿಕಾರಿಗಳಿಗೆ ಮೊದಲಿನಿಂದಲೂ ಕಾಂಗ್ರೆಸ್ ಮೇಲೆ ಸಿಟ್ಟಿದೆ. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ನಮ್ಮ ಪಕ್ಷದ ಶಾಸಕರ ನಡುವೆ ಒಡಕು ಮೂಡಿಸಲು ಸಂಚು ಮಾಡುತ್ತಿದ್ದಾರೆ’ ಎಂದಿದ್ದಾರೆ.
‘ಚುನಾವಣೆಯಲ್ಲಿ ಎಲ್ಲ ಪಕ್ಷದವರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆ ಹಣ ಎಲ್ಲಿಂದ ಬಂತು? ಯಾರದು ಎಂಬುದು ಇಲ್ಲಿಯವರೆಗೂ ಹೊರಗೆ ಬಂದಿಲ್ಲ. ನಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡು ತೊಂದರೆ ಕೊಟ್ಟರೆ ಪಕ್ಷದಲ್ಲಿ ಬೇಧಭಾವ ಉಂಟಾಗಿ ಎದುರಿನವರಿಗೆ ಅನುಕೂಲ ಆಗುತ್ತದೆ ಎಂಬ ಲೆಕ್ಕಚಾರವಿದೆ. ಅವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇರುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.