ADVERTISEMENT

ದೆಹಲಿ: ₹11,000 ಕೋಟಿ ವೆಚ್ಚದ ಎರಡು ಪ್ರಮುಖ ಹೆದ್ದಾರಿ ಯೋಜನೆ ಉದ್ಘಾಟಿಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2025, 9:46 IST
Last Updated 17 ಆಗಸ್ಟ್ 2025, 9:46 IST
   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು ₹11,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು.

ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-2ರ ಒಂದು ಭಾಗವನ್ನು ಅವರು ಉದ್ಘಾಟಿಸಿದ್ದು, ಇದು ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಯಾಣವನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿದೆ ಎಂದು ವರದಿ ತಿಳಿಸಿದೆ.

ಬಹುನಿರೀಕ್ಷಿತ ಹೆದ್ದಾರಿಗಳನ್ನು ಉದ್ಘಾಟಿಸುವ ಮೊದಲು, ಪ್ರಧಾನಿ ಮೋದಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಮೆಗಾ ರೋಡ್‌ಶೋ ನಡೆಸಿದರು.

ADVERTISEMENT

‌‘ಈ ಯೋಜನೆಗಳು ಜನರ ಜೀವನವನ್ನು ಸುಧಾರಿಸುವ ಮತ್ತು ಸುಗಮ ಚಲನಶೀಲತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರೂಪಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ’ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ಬಳಿಕ ಹರಿಯಾಣದ ಸೋನಿಪತ್‌, ರೋಹ್ತಕ್‌, ಬಹದ್ದೂರ್‌ಗಢ ಹಾಗೂ ಗುರುಗ್ರಾಮದಿಂದ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ನಡುವಿನ ಪ್ರಯಾಣದ ಸಮಯ ಕಡಿತಗೊಳ್ಳಲಿದೆ.

‘ದ್ವಾರಕಾ ಎಕ್ಸ್‌ಪ್ರೆಸ್‌ವೇ ಹಾಗೂ ಯುಇಆರ್‌–2ರಿಂದ ರಾಷ್ಟ್ರ ರಾಜಧಾನಿ ದೆಹಲಿಯ ನಾಗರಿಕರಿಗೆ ನೆರವಾಗಲಿದೆ. ದೆಹಲಿ ಜನರ ಸಂಕಷ್ಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಯೋಜನೆ ಉದ್ಘಾಟಿಸಿ ಪ್ರಧಾನಿ ಮೋದಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ‘ಎರಡು ಯೋಜನೆಗಳ ಜಾರಿಯಿಂದ ದೆಹಲಿಯಲ್ಲಿ ಸಂಚಾರ ದಟ್ಟಣೆಯು ಶೇಕಡಾ 50ರಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದರು.

ದೆಹಲಿ ವಿಭಾಗದ 10.1 ಕಿ.ಮೀ. ಉದ್ದದ ‘ದ್ವಾರಕಾ ಎಕ್ಸ್‌ಪ್ರೆಸ್‌ ವೇ’ ಅನ್ನು ₹5,360 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇನ ಹರಿಯಾಣ ವಿಭಾಗದಲ್ಲಿರುವ 19 ಕಿ.ಮೀ. ದೂರವನ್ನು 2024ರ ಮಾರ್ಚ್‌ ತಿಂಗಳಲ್ಲಿ ಉದ್ಘಾಟಿಸಲಾಗಿತ್ತು.

ಆಲೀಪುರ್‌–ದಿಚಾವೊ ಕಲಾನ್ ನಡುವಿನ ಯುಇಆರ್‌ ಎರಡನೇ ಭಾಗವನ್ನು ಇದೇ ವೇಳೆ ಸಂಚಾರಕ್ಕೆ  ಮುಕ್ತಗೊಳಿಸಲಾಯಿತು. ದೆಹಲಿಯಿಂದ ಹರಿಯಾಣದ ಗಡಿಭಾಗವಾದ ಸೋನಿಪತ್‌, ಬಹಾದ್ದೂರ್‌ಗಢಕ್ಕೆ ನೇರ ಸಂಪರ್ಕ ಕಲ್ಪಿಸಲಿದ್ದು, ಒಟ್ಟು ₹5,580 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೆಹಲಿಯ ಒಳ ಹಾಗೂ ಹೊರವರ್ತುಲ ರಸ್ತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಕೈಗಾರಿಕಾ ಪ್ರದೇಶಗಳನ್ನು ಕ್ಷಿಪ್ರವಾಗಿ ತಲುಪಲು ನೆರವಾಗಲಿದೆ. 

ಹೆದ್ದಾರಿ ಉದ್ಘಾಟಿಸಿದ ಬಳಿಕ ಕಾರ್ಮಿಕರ ಜೊತೆಗೆ ಪ್ರಧಾನಿ ಮೋದಿ ಸಂಭಾಷಣೆ ನಡೆಸಿದರು. ಅಲ್ಲದೇ, ಮುಂಡ್ಕ–ಬಕ್ಕರ್‌ವಾಲಾ ಗ್ರಾಮದ ಟೋಲ್‌ ಪ್ಲಾಜಾದರೆಗೂ ರೋಡ್‌ ಶೋ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.