ನರೇಂದ್ರ ಮೋದಿ
(ರಾಯಿಟರ್ಸ್ ಚಿತ್ರ)
ಸುರೇಂದ್ರನಗರ (ಗುಜರಾತ್): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶ್ರೀರಾಮ ಮತ್ತು ಶಿವನ ಕುರಿತು ಈಚೆಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದು ವಿರೋಧ ಪಕ್ಷವು ತನ್ನ ಓಲೈಕೆ ರಾಜಕಾರಣದಿಂದ ಹಿಂದೂಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಪಕ್ಷ ಈಗ ಹಿಂದೂಗಳ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದೆ. ಖರ್ಗೆ ಅವರು ಶ್ರೀರಾಮ ಮತ್ತು ಶಿವನ ಬಗ್ಗೆ ದುರುದ್ದೇಶದಿಂದ ಅತ್ಯಂತ ಅಪಾಯಕಾರಿ ಹೇಳಿಕೆ ನೀಡಿದ್ದಾರೆ. ಅವರು ರಾಮ ಮತ್ತು ಶಿವನ ಭಕ್ತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ನಮ್ಮ ಸಾವಿರಾರು ವರ್ಷಗಳ ಸಂಪ್ರದಾಯಗಳನ್ನು ಮುರಿಯಲು ಮೊಘಲರಿಗೂ ಸಾಧ್ಯವಾಗಿರಲಿಲ್ಲ. ಈಗ ಕಾಂಗ್ರೆಸ್ ಅದನ್ನು ಮುರಿಯಲು ಬಯಸುತ್ತಿದೆಯೇ? ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದೆಯೇ?’ ಎಂದು ಕಿಡಿಕಾರಿದರು.
ಛತ್ತೀಸ್‌ಗಢದಲ್ಲಿ ಮಂಗಳವಾರ ತನ್ನ ಅಭ್ಯರ್ಥಿ ಶಿವಕುಮಾರ್ ಡಹರಿಯಾ ಪರ ನಡೆದ ರ್‍ಯಾಲಿಯಲ್ಲಿ ಖರ್ಗೆ ಅವರು ‘ಇವನ ಹೆಸರು ಶಿವಕುಮಾರ್. ಇವನು ಶಿವ ಆಗಿರುವುದರಿಂದ ರಾಮನೊಂದಿಗೆ ಸ್ಪರ್ಧಿಸಬಲ್ಲನು. ನಾನು ಮಲ್ಲಿಕಾರ್ಜುನ (ಶಿವನ ಇನ್ನೊಂದು ಹೆಸರು ಮಲ್ಲಿಕಾರ್ಜುನ). ಅಂದರೆ ನಾನೂ ಶಿವ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.