ADVERTISEMENT

Delhi Elections | ದೆಹಲಿ ಜನರನ್ನು ಶಪಿಸಲು ಮೋದಿ ಭಾಷಣ: ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2025, 2:44 IST
Last Updated 4 ಜನವರಿ 2025, 2:44 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಹಾಗೂ&nbsp;ಎಎಪಿ ನಾಯಕ ಅರವಿಂದ ಕೇಜ್ರಿವಾಲ್</p></div>

ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ನಾಯಕ ಅರವಿಂದ ಕೇಜ್ರಿವಾಲ್

   

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ಹತ್ತು ವರ್ಷಗಳ ಆಡಳಿತವನ್ನು ದೆಹಲಿ ಪಾಲಿನ 'ಅನಾಹುತ' ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಜ್ರಿವಾಲ್‌, ಕೇಂದ್ರ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಒಂದಿಷ್ಟಾದರೂ ಕೆಲಸ ಮಾಡಿದ್ದರೆ, ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರವನ್ನು ಹಾಗೂ ದೆಹಲಿಯ ಜನರನ್ನು ಟೀಕಿಸಲು ಮೋದಿ ಅವರು ತಮ್ಮ ಭಾಷಣದ ಬಹುತೇಕ ಸಮಯವನ್ನು ವ್ಯಯಿಸಬೇಕಿರಲಿಲ್ಲ ಎಂದು ಕುಟುಕಿದ್ದಾರೆ.

ADVERTISEMENT

'ಎಎಪಿ ಸರ್ಕಾರವು ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಮತ್ತು ರಸ್ತೆ ಸೇರಿದಂತೆ ದೆಹಲಿಯಲ್ಲಿ ಏನೆಲ್ಲ ಮಾಡಿದೆ ಎಂಬುದನ್ನು ಪಟ್ಟಿ ಮಾಡಲು ಮೋದಿ ಅವರಿಗೆ 2–3 ಗಂಟೆ ಸಾಕಾಗುವುದಿಲ್ಲ. ಆದರೆ, ಕೇಂದ್ರ ಸರ್ಕಾರದ ಸಾಧನೆ ಶೂನ್ಯ' ಎಂದು ಟೀಕಿಸಿದ್ದಾರೆ.

'ಎಎಪಿ ಸರ್ಕಾರ ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ. ಆದರೆ, ಕೇಂದ್ರದಲ್ಲಿರುವ ಬಿಜೆಪಿ, ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಬಹುದಾದಂತಹ ಯಾವುದೇ ಕಾರ್ಯ ಮಾಡಿಲ್ಲ. ಅವರು ತಮ್ಮ 43 ನಿಮಿಷಗಳ ಭಾಷಣದಲ್ಲಿ 39 ನಿಮಿಷವನ್ನು ದೆಹಲಿ ಜನರನ್ನು ಮತ್ತು ಭಾರಿ ಬಹುಮತದೊಂದಿಗೆ ಅಧಿಕಾರದಲ್ಲಿರುವ ಸರ್ಕಾರವನ್ನು ನಿಂದಿಸುವುದಕ್ಕೆ ಮೀಸಲಿಟ್ಟರು. ಬಿಜೆಪಿಯು ತೆಗಳಿಕೆಗಳ ಮೂಲಕ ಚುನಾವಣೆಯನ್ನು ಎದುರಿಸುತ್ತಿದೆ' ಎಂದು ದೂರಿದ್ದಾರೆ.

ಎಎಪಿಯನ್ನು ಅನಾಹುತ ಎನ್ನುವ ಮೋದಿ, ಬಿಜೆಪಿ ಪಾಲಿನ ಮೂರು ಅನಾಹುತಗಳನ್ನು ಲೆಕ್ಕಹಾಕಬಹುದು. ದೆಹಲಿಯಲ್ಲಿ ಚುನಾವಣೆ ಎದುರಿಸಲು ಮುಖ್ಯಮಂತ್ರಿ ಅಭ್ಯರ್ಥಿಯೇ ಇಲ್ಲದಿರುವುದು, ಚುನಾವಣೆಗೆ ಪಕ್ಷದಿಂದ ಸ್ಪಷ್ಟ ನಿರೂಪಣೆ ಇಲ್ಲದಿರುವುದು ಹಾಗೂ ಯಾವುದೇ ಕಾರ್ಯಸೂಚಿ ಹೊಂದಿಲ್ಲದಿರುವುದು ಬಿಜೆಪಿ ಪಾಲಿನ ಅನಾಹುತಗಳು ಎಂದು ತಿವಿದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದ ಪ್ರಧಾನಿ ಮೋದಿ, ಎಎಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.