
ಮುಂಬೈ: ‘ಮುಂಬೈ ವಿಶ್ವವಿದ್ಯಾಲಯದ ಉರ್ದು ವಿಭಾಗವು ಆಯೋಜಿಸಿದ್ದ ‘ಜಶ್ನ್–ಎ–ಉರ್ದು’ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆದರೆ, ಕೊನೇ ಗಳಿಕೆಯಲ್ಲಿ ಆಹ್ವಾನವನ್ನು ಹಿಂಪಡೆದರು’ ಎಂದು ನಟ ನಾಸಿರುದ್ದೀನ್ ಶಾ ಹೇಳಿದ್ದಾರೆ. ‘ಸ್ವಯಂ ಘೋಷಿತ ‘ವಿಶ್ವಗುರು’ವಿನ ಕುರಿತು ನಾನು ವಿಮರ್ಶೆ ಮಾಡುತ್ತೇನೆ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ’ ಎಂದು ತಿಳಿಸಿದರು.
ಈ ಬಗ್ಗೆ ಇಂಗ್ಲಿಷ್ ಪತ್ರಿಕೆಯೊಂದಲ್ಲಿ ಅವರು ಬರಹ ಬರೆದಿದ್ದಾರೆ. ನಾಸಿರುದ್ದೀನ್ ಶಾ ಅವರ ಆರೋಪದ ಕುರಿತು ವಿಶ್ವವಿದ್ಯಾಲಯವು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
‘ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲು ನಾನು ಕಾತರನಾಗಿದ್ದೆ. ಕಾರ್ಯಕ್ರಮದ ಹಿಂದಿನ ರಾತ್ರಿ ನನಗೆ ಕರೆ ಮಾಡಿ ‘ಕಾರ್ಯಕ್ರಮಕ್ಕೆ ಬರುವ ಅಗತ್ಯವಿಲ್ಲ’ ಎಂದರು. ನಾನು ಇದನ್ನು ಅವಮಾನ ಎಂದುಕೊಳ್ಳಲಿಲ್ಲ. ಆದರೆ, ಗಾಯದ ಮೇಲೆ ಬರೆ ಹಾಕಬೇಕು ಎಂದು ನಿರ್ಧರಿಸಿದ ಆಯೋಜಕರು, ‘ನಾನೇ ಆಹ್ವಾನ ಸ್ವೀಕರಿಸಲಿಲ್ಲ. ಬರುವುದಕ್ಕೆ ನಿರಾಕರಿಸಿದೆ’ ಎಂದು ಪ್ರೇಕ್ಷಕರಿಗೆ ಹೇಳಿದರು’ ಎಂದರು.
‘ನಾನು ದೇಶದ ವಿರುದ್ಧ ಮಾತನಾಡುತ್ತೇನೆ ಎಂಬಂಥ ಅಭಿಪ್ರಾಯವಿದ್ದರೆ, ಅದನ್ನು ನೇರವಾಗಿ ನನಗೇ ಹೇಳುವ ಧೈರ್ಯ ಇಲ್ಲದಿರುವುದಕ್ಕೆ ನನಗೇನೂ ಆಶ್ಚರ್ಯವಾಗುತ್ತಿಲ್ಲ. ಆದರೆ, ದೇಶದ ವಿರುದ್ಧ ನಾನು ಮಾತನಾಡಿದ್ದೇನೆ ಎಂದಿರುವ ವಿಶ್ವವಿದ್ಯಾಲಯದ ಅಧಿಕಾರಿಯು, ಈ ಬಗ್ಗೆ ನನ್ನ ಒಂದೇ ಒಂದು ಹೇಳಿಕೆಯನ್ನು ತೋರಿಸಲಿ’ ಎಂದು ತಮ್ಮ ಬರಹದಲ್ಲಿ ಅವರು ಸವಾಲು ಹಾಕಿದರು.
ತೇಲ್ತುಂಬ್ಡೆ ಅವರ ಗೋಷ್ಠಿ ರದ್ದು: ಲೇಖಕ ಆನಂದ್ ತೇಲ್ತುಂಬ್ಡೆ ಅವರ ಆತ್ಮಚರಿತ್ರೆ ‘ದಿ ಸೆಲ್ ಆ್ಯಂಡ್ ದಿ ಸೋಲ್: ಎ ಪ್ರಿಸನ್ ಮೆಮೊಯರ್’ ಕುರಿತು ‘ಕಾಲಾ ಘೋಢಾ ಕಲಾ ಉತ್ಸವ’ದಲ್ಲಿ ಗೋಷ್ಠಿ ಆಯೋಜಿಸಲಾಗಿತ್ತು. ಆದರೆ, ಮುಂಬೈ ಪೊಲೀಸರ ನಿರ್ದೇಶನದ ಮೇರೆಗೆ ಈ ಗೋಷ್ಠಿಯನ್ನು ಮಂಗಳವಾರ ರಾತ್ರಿ ರದ್ದು ಮಾಡಲಾಗಿತ್ತು. ಈ ಗೋಷ್ಠಿಯು ಫೆ.5ಕ್ಕೆ ನಡೆಯಬೇಕಿತ್ತು.
‘ಹೊಗಳು ಗೀತೆ’ ಹಾಡದಿದ್ದರೆ ದೇಶದ್ರೋಹವೇ?
ಜಾರ್ಜ್ ಆರ್ವೆಲ್ ಅವರ ‘1984’ ಕಾದಂಬರಿಯಲ್ಲಿ ಇರುವಂತೆ ತಮ್ಮ ರಾಜಕೀಯ ಶತ್ರುಗಳ ಕುರಿತು ನಿತ್ಯ ಎರಡು ನಿಮಿಷ ದ್ವೇಷ ಉಗುಳುವ ಚಟುವಟಿಕೆಯಂತೆ ನಮ್ಮ ದೇಶದಲ್ಲಿ 24 ಗಂಟೆಯೂ ದ್ವೇಷ ಉಗುಳಲಾಗುತ್ತಿದೆ. ‘ಅತ್ಯುನ್ನತ ನಾಯಕ’ನ ಹೊಗಳು ಗೀತೆಯನ್ನು ಹಾಡದಿದ್ದರೆ ಅದು ದೇಶದ್ರೋಹಕ್ಕೆ ಸಮ ಎಂದು ಇದೇ ಕಾದಂಬರಿಯಲ್ಲಿ ಬರುತ್ತದೆ. ಹೆಚ್ಚು ಕಮ್ಮಿ ಇದೇ ರೀತಿಯ ಪರಿಸ್ಥಿತಿ ಏನಾದರೂ ನಮ್ಮ ದೇಶದಲ್ಲಿ ಇದೆಯೇ? ಪ್ರೀತಿಸುವುದನ್ನು ಕಲಿಸಿದ ನಾನು ಬೆಳದ ದೇಶ ಇದಲ್ಲ ನಾಸಿರುದ್ದೀನ್ ಶಾ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.