ADVERTISEMENT

ಮಕ್ಕಳಿಗೆ ಭಾರತೀಯ ಜ್ಞಾನದ ಅರಿವು ನೀಡಿ: ಎನ್‌ಸಿಎಫ್‌ ಕರಡಿನಲ್ಲಿ ಶಿಫಾರಸು

ಜಾನಪದ ಕಥೆಗಳು, ಉಪನಿಷತ್ತುಗಳು ತರ್ಕ ಜ್ಞಾನ ಹೆಚ್ಚಿಸುತ್ತವೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 16:05 IST
Last Updated 7 ಏಪ್ರಿಲ್ 2023, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ವಿಕ್ರಮ ಬೇತಾಳ, ಪಂಚತಂತ್ರದ ಕಥೆಗಳು ಹಾಗೂ ಉಪನಿಷತ್ತುಗಳನ್ನು ಶಾಲಾ ಪಠ್ಯಗಳಲ್ಲಿ ಸೇರಿಸಬೇಕು. ಆ ಮೂಲಕ ಭಾರತೀಯ ಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು’ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ಕರಡಿನಲ್ಲಿ ಶಿಫಾರಸು ಮಾಡಲಾಗಿದೆ. ಶಿಕ್ಷಣ ಸಚಿವಾಲಯವು ಇದಕ್ಕೆ ಸಂಬಂಧಿಸಿ ಜನರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

‘ವಿವಿಧ ಜ್ಞಾನಶಾಖೆಗಳಿಗೆ ಭಾರತ ನೀಡಿದ ಕೊಡುಗೆಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ಈ ಭಾರತೀಯ ಜ್ಞಾನವು ಐತಿಹಾಸಿಕ ಸತ್ಯಾಸತ್ಯತೆಗಳ ಆಧಾರದಲ್ಲಿ ರೂಪುಗೊಂಡಿವೆ. ಜೊತೆಗೆ, ಭಾರತೀಯ ಅನುಸಂಧಾನಕ್ಕೆ ಸಮಗ್ರತೆಯ ಗುಣವಿದೆ. ಈ ಅನುಸಂಧಾನವು ಒಂದು ವಿಷಯದ ಆಳವಾದ ಅಧ್ಯಯನಕ್ಕೆ ಸಹಾಯ ಮಾಡಲಿದೆ’ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಕೇವಲ ಇಷ್ಟೇ ಅಲ್ಲದೆ, ಮಕ್ಕಳ ಕಲಿಕಾ ತಂತ್ರಗಳ ಬಗ್ಗೆಯೂ ರಾಷ್ಟ್ರೀಯ ಪಠ್ಯಕ್ತಮ ಚೌಕಟ್ಟು ಪ್ರಸ್ತಾಪಿಸಿದೆ. ‘ಆಟಿಕೆಗಳು, ಹಾಡುಗಳು, ಕುಣಿತ ಹಾಗೂ ಆಟಗಳು ಮಕ್ಕಳಿಗೆ ವಿಷಯಗಳನ್ನು ಅರ್ಥ ಮಾಡಿಸುವ ತಂತ್ರಗಳಾಗಬೇಕು’ ಎಂದಿದೆ.

ADVERTISEMENT

ಉಪನಿಷತ್ತು: ‘ಗುರುವಿನ ಬಳಿ ಶಿಷ್ಯ ಕುಳಿತುಕೊಳ್ಳುವುದು’ ಎನ್ನುವುದು ಉ‍ಪನಿಷತ್ತಿನ ಅಕ್ಷರಶಃ ಅರ್ಥ. ‘ಶಿಷ್ಯರ’ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡುವ’ ಕ್ರಮದಲ್ಲಿ ಉಪನಿಷತ್ತಿನ ರಚನೆಯಾಗಿದೆ. ಗುರು ಹಾಗೂ ಶಿಷ್ಯರ ಮಧ್ಯೆ ಸರಳವಾಗಿದ್ದ ತಾರ್ಕಿಕ ವಾಗ್ವಾದವು ಸಂಕೀರ್ಣವಾಗುತ್ತದೆ, ನಂತರ ಅದು ಮೂರ್ತದಿಂದ ಅಮೂರ್ತದ ಚರ್ಚೆಗೆ ಹೊರಳುತ್ತದೆ. ನಂತರ ಅದು ಗೊತ್ತಿರುವುದರಿಂದ ಗೊತ್ತಿಲ್ಲದರೆಡೆಗೆ ಸರಿಯುತ್ತದೆ. ಈ ಹಂತಗಳಲ್ಲಿ ನಡೆಯುವ ಚರ್ಚೆ, ವಾಗ್ವಾದಗಳು ಮಕ್ಕಳಲ್ಲಿ ಪ್ರಶ್ನೆ ಕೇಳುವ ಅಭ್ಯಾಸದಿಂದ ಆಗುವ ಅನುಕೂಲದ ಕುರಿತು ತಿಳಿಸಿಕೊಡಲಿದೆ’ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

‘ಯಮನನ್ನ ಪ್ರಶ್ನೆ ಮಾಡುವ, ಯಮ ಜೊತೆ ಪ್ರಶ್ನೋತ್ತರ ನಡೆಸುವ ಕಠೋಪನಿಷತ್ತಿನ ನಚಿಕೇತನ ಕಥೆಗಳು ಪಠ್ಯಕ್ರಮದ ಭಾಗವಾಗಬೇಕು. ‘ಸಾವಿನ ನಂತರ ಬದುಕು ಇದೆಯೇ ಅಥವಾ ಸಾವೇ ಕೊನೆಯೇ?’ ಎಂದು ಸಾವು ಮತ್ತು ಬದುಕಿನ ಕುರಿತು ನಚಿಕೇತ ಎತ್ತುವ ಪ್ರಶ್ನೆಗಳು ಸರಳ ಎನ್ನಿಸಬಹುದು. ಆದರೆ, ಆ ಪ್ರಶ್ನೆಗಳು ಮೂಲಭೂತವಾದವು. ಜೊತೆಗೆ ಆದಿ ಶಂಕರಾಚಾರ್ಯ ಹಾಗೂ ಮಂಡನ ಮಿಶ್ರಾರಂಥವರ ನಡುವಿನ ಸಂವಾದಗಳೂ ಮಹತ್ವದ್ದಾಗಿವೆ’ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

‘ಗಾಂಧಿಯ ಪರಿಸರ ಸಿದ್ಧಾಂತ ಕಲಿಸಿ’

‘ವೇದ, ಉಪನಿಷತ್ತು, ಚರಕ ಸಂಹಿತ, ಮತ್ಸ್ಯ ಪುರಾಣ, ಪಂಚತಂತ್ರ ಹಾಗೂ ಜಾತಕದಂಥ ಗ್ರಂಥಗಳಲ್ಲಿ ಇರುವ ‘ಭಾರತೀಯ ಪರಿಸರವಾದದ ಶಾಸ್ತ್ರೀಯ ಕಲ್ಪನೆ’ಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಇದಕ್ಕೆ ಪೂರಕವಾಗಿ ಮಹಾತ್ಮ ಗಾಂಧಿ ಹಾಗೂ ಅಮರ್ತ್ಯ ಸೇನ್‌ ಅವರ ಆಧುನಿಕ ಭಾರತೀಯ ಪರಿಸರ ಸಿದ್ಧಾಂತವನ್ನೂ ಹೇಳಿಕೊಡಬೇಕು. ಚಿಪ್ಕೊ ಚಳವಳಿ, ಹಸಿರು ಕ್ರಾಂತಿ ಹಾಗೂ ನವಧಾನ್ಯ ಸಂಸ್ಥೆಗಳ ಕುರಿತೂ ಮಕ್ಕಳಿಗೆ ಪಾಠ ಮಾಡಬೇಕು’ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ತನ್ನ ಶಿಫಾರಸಿನಲ್ಲಿ ಹೇಳಿದೆ.

ಇತರೆ ಶಿಫಾರಸುಗಳು

* ಜಾತಕ ಕಥೆಗಳ ಸುಲಸ ಮತ್ತು ಸಟ್ಟುಕ, ವಿಕ್ರಮ ಬೇತಾಳದ ಕಥೆಗಳಂಥ ಜಾನಪದ ಕಥೆಗಳೂ ಸಾಹಿತ್ಯದೊಂದಿಗೆ ಇರುವ ಭಾರತೀಯ ಪರಂಪರೆಯನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ

* ಅಮೃತ ಪ್ರೀತಂ ಹಾಗೂ ರವೀಂದ್ರನಾಥ ಟ್ಯಾಗೋರ್‌ ಅವರ ಕಾವ್ಯಗಳು ಎರಡು ಪ್ರದೇಶದ ಸಾಹಿತ್ಯದ ಪರಿಚಯವನ್ನು ನೀಡುತ್ತದೆ

* ಪಂಚತಂತ್ರ, ಜಾತಕ, ಹಿತೋಪನಿಷತ್ತು ಹಾಗೂ ಪುರುಷಾರ್ಥಸಿದ್ಧ್ಯುಪಾಯದಂಥ ಕಥೆಗಳು ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡುತ್ತವೆ. ಮೋಸ, ಹಿಂಸೆ, ಕೃತಿಚೌರ್ಯ, ಕಸ ಹಾಕುವುದು, ಸಹಿಷ್ಣುತೆ, ಸಮಾನತೆ ಹಾಗೂ ಕರುಣೆಗಳಂಥ ಸಂದರ್ಭಗಳನ್ನು ನೈತಿಕವಾಗಿ ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಕಥೆಗಳು ಸಹಾಯ ಮಾಡುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.