ADVERTISEMENT

ನ್ಯಾಷನಲ್‌ ಹೆರಾಲ್ಡ್‌: ತುರ್ತು ವಿಚಾರಣೆಗೆ ಅವಸರ ಇಲ್ಲ ಎಂದ ದೆಹಲಿ ಹೈಕೋರ್ಟ್‌

ಪಿಟಿಐ
Published 13 ನವೆಂಬರ್ 2018, 17:06 IST
Last Updated 13 ನವೆಂಬರ್ 2018, 17:06 IST

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕಾ ಕಚೇರಿಯ ಭೋಗ್ಯ ಅವಧಿಯನ್ನು ಮುಕ್ತಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ, ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

‘ಪ್ರಕರಣದ ಕಡತ ಇನ್ನೂ ನ್ಯಾಯಾಲಯಕ್ಕೆ ಸಿಕ್ಕಿಲ್ಲ. ಹಾಗಾಗಿ, ಮಂಗಳವಾರವೇ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಸುನೀಲ್‌ ಗೌರ್‌ ಹೇಳಿದರು.

56 ವರ್ಷಗಳಿಂದ ಸಂಸ್ಥೆಯು ಇಲ್ಲಿ ಕಚೇರಿಯನ್ನು ಭೋಗ್ಯ ಪಡೆದು ಪತ್ರಿಕೆಯನ್ನು ನಡೆಸುತ್ತಿದೆ. ಕಳೆದ 10 ವರ್ಷಗಳಿಂದ ಕಟ್ಟಡದ ಕಚೇರಿಯಲ್ಲಿ ಯಾವುದೇ ಪತ್ರಿಕೆ ಕಾರ್ಯನಿರ್ವಹಿಸುತ್ತಿಲ್ಲ. ಇದು ಭೋಗ್ಯ ಕರಾರಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ,ಕೂಡಲೇ ಕಚೇರಿ ಖಾಲಿ ಮಾಡಿ, ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸಬೇಕು ಎಂದು ನಗರಾಭಿವೃದ್ಧಿ ಸಚಿವಾಲಯವು ಎಜೆಎಲ್‌ಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು.

ADVERTISEMENT

ನವೆಂಬರ್‌ 15ರೊಳಗೆ ಕಚೇರಿಯನ್ನು ತೆರವುಗೊಳಿಸಿ, ಅದನ್ನು ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ಸಚಿವಾಲಯವು ಅಕ್ಟೋಬರ್‌ 30ರಂದು ಆದೇಶಿಸಿತ್ತು.

ಮೊದಲು, ಡಿಸೆಂಬರ್‌ನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದ ನ್ಯಾಯಾಲಯ, ಎಜೆಎಲ್‌ ಮನವಿ ಮೇರೆಗೆ ನವೆಂಬರ್‌ 15ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.