ADVERTISEMENT

ನ್ಯಾಷನಲ್‌ ಹೆರಾಲ್ಡ್ ಪ್ರಕರಣ | ಇ.ಡಿ ದಾಖಲಿಸಿದ ಪ್ರಕರಣವೇ ವಿಚಿತ್ರ: ಸೋನಿಯಾ

ಪಿಟಿಐ
Published 4 ಜುಲೈ 2025, 15:36 IST
Last Updated 4 ಜುಲೈ 2025, 15:36 IST
<div class="paragraphs"><p> ಸೋನಿಯಾ</p></div>

ಸೋನಿಯಾ

   

ನವದೆಹಲಿ: ‘ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ನ್ಯಾಷನಲ್‌ ಹೆರಾಲ್ಡ್ ಪ್ರಕರಣ ನಿಜವಾಗಿಯೂ ವಿಚಿತ್ರವಾಗಿದೆ. ವಿಚಿತ್ರವಷ್ಟೆ ಅಲ್ಲ, ಇದೊಂದು ಅಸಾಮಾನ್ಯ ಪ್ರಕರಣವೂ ಆಗಿದೆ’ ಎಂಬ ವಾದವನ್ನು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಮಂಡಿಸಿದ್ದಾರೆ.

ಸೋನಿಯಾ ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಹಣದ ಅಕ್ರಮ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿರುವ ಪ್ರಕರಣವಿದು. ಆದರೆ, ಇಲ್ಲಿ ಯಾವುದೇ ಸ್ವತ್ತು ಒಳಗೊಂಡಿರದ ಅಥವಾ ಕೇವಲ ಸ್ವತ್ತಿನ ಕಲ್ಪನೆ ಆಧಾರದಲ್ಲಿ ಆರೋಪ ಮಾಡಲಾಗಿರುವ ಪ್ರಕರಣ ಇದಾಗಿದೆ’ ಎಂದು ವಾದಿಸಿದರು.

ADVERTISEMENT

ಜಾರಿ ನಿರ್ದೇಶನಾಲಯ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರು ಜುಲೈ 3ರಂದು ತಮ್ಮ ವಾದ ಪೂರ್ಣಗೊಳಿಸಿದ್ದರು. ಶುಕ್ರವಾರ ಪ್ರತಿವಾದ ಮಂಡನೆ ವೇಳೆ, ಸಿಂಘ್ವಿ ಅವರು ಈ ಮಾತು ಹೇಳಿದರು.

ಅಸೋಸಿಯೇಟೆಡ್ ಜರ್ನಲ್ಸ್‌ ಲಿಮಿಟೆಡ್‌(ಎಜೆಎಲ್‌) ₹90 ಕೋಟಿ ಸಾಲ ಪಡೆದಿತ್ತು. ಈ ಸಾಲ ತೀರಿಸುವುದಕ್ಕೆ ಪ್ರತಿಯಾಗಿ ವಂಚನೆ ಮಾರ್ಗದ ಮೂಲಕ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಂಗ್‌ ಇಂಡಿಯನ್ ಕಂಪನಿಯಲ್ಲಿ ಶೇ 76ರಷ್ಟು ಷೇರುಗಳನ್ನು ಪಡೆದುಕೊಂಡಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಇದನ್ನು ಪ್ರಸ್ತಾಪಿಸಿ ವಾದ ಮುಂದುವರಿಸಿದ ಸಿಂಘ್ವಿ, ‘ಎಜೆಎಲ್‌ ಅನ್ನು ಸಾಲಮುಕ್ತ ಮಾಡುವ ಭಾಗವಾಗಿ ಯಂಗ್‌ ಇಂಡಿಯನ್‌ ಕಂಪನಿಯ ಷೇರುಗಳನ್ನು ಪಡೆದುಕೊಳ್ಳಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

‘ಸಾಲ ಮುಕ್ತವಾಗುವುದಕ್ಕೆ ಪ್ರತಿಯೊಂದು ಕಂಪನಿಗೆ ಕಾನೂನಿನಡಿ ಹಲವು ಅವಕಾಶಗಳು ಇವೆ. ಒಂದು ಸಂಸ್ಥೆಯನ್ನು ಸಾಲ ಮುಕ್ತ ಮಾಡಿದ ಮೇಲೆ, ಆ ಸಾಲವನ್ನು ಮತ್ತೊಂದು ಕಂಪನಿಗೆ ವಹಿಸಲಾಗುತ್ತದೆ. ಹೀಗಾಗಿ ಒಂದು ಕಂಪನಿ ಸಾಲದಿಂದ ಮುಕ್ತವಾಗುತ್ತದೆ. ಅದರಲ್ಲೂ ಯಂಗ್‌ ಇಂಡಿಯನ್‌, ಲಾಭ ಮಾಡಿಕೊಳ್ಳುವ ಉದ್ಧೇಶದ ಕಂಪನಿಯಲ್ಲ’ ಎಂದು ಸಿಂಘ್ವಿ ವಾದಿಸಿದರು.

‘ಹಲವು ವರ್ಷಗಳ ಕಾಲ ಯಾವ ಕ್ರಮವನ್ನೂ ಜರುಗಿಸದ ಜಾರಿ ನಿರ್ದೇಶನಾಲಯ, ಖಾಸಗಿ ದೂರು ಆಧರಿಸಿ ಪ್ರಕರಣ ದಾಖಲಿಸಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.