ADVERTISEMENT

ನ್ಯಾಷನಲ್ ಹೆರಾಲ್ಡ್ ಕೇಸ್: ರಾಹುಲ್, ಸೋನಿಯಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ED

ಪಿಟಿಐ
Published 15 ಏಪ್ರಿಲ್ 2025, 12:58 IST
Last Updated 15 ಏಪ್ರಿಲ್ 2025, 12:58 IST
<div class="paragraphs"><p>ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ </p></div>

ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ

   

(ಚಿತ್ರ ಕೃಪೆ; @INCKarnataka)

ನವದೆಹಲಿ: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆಯ ಆರೋಪ ಹೊರಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ADVERTISEMENT

ಏಪ್ರಿಲ್‌ 9ರಂದು ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗನೆ, ವಿಚಾರಣೆಯನ್ನು ಏಪ್ರಿಲ್‌ 25ಕ್ಕೆ ಮುಂದೂಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸ್ಯಾಮ್ ಪಿತ್ರೊಡಾ ಮತ್ತು ಸುಮನ್ ದುಬೆ ಅವರನ್ನು ಕೂಡ ಆರೋ‍‍ಪಿಗಳನ್ನಾಗಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಇ.ಡಿ ಪರ ವಿಶೇಷ ವಕೀಲರು ಹಾಗೂ ತನಿಖಾಧಿಕಾರಿಯು ಪ್ರಕರಣದ ಡೈರಿಯನ್ನು ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಹಣದ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ 3 (ಹಣದ ಅಕ್ರಮ ವರ್ಗಾವಣೆ) ಹಾಗೂ ಸೆಕ್ಷನ್ 4 (ಹಣದ ಅಕ್ರಮ ವರ್ಗಾವಣೆಗೆ ಶಿಕ್ಷೆ) ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್‌ 26ರಂದು ದಾಖಲಿಸಿದ ಖಾಸಗಿ ದೂರನ್ನು ಪಟಿಯಾಲಾ ಹೌಸ್‌ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ, ಇ.ಡಿ ತನಿಖೆಯು 2021ರಲ್ಲಿ ಶುರುವಾಯಿತು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದುಬೆ, ಪಿತ್ರೊಡಾ, ಕಾಂಗ್ರೆಸ್ಸಿನ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡೀಸ್, ಖಾಸಗಿ ಕಂಪನಿಯಾದ ಯಂಗ್‌ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದನ್ನು ದೂರಿನಲ್ಲಿ ಎತ್ತಿತೋರಿಸಲಾಗಿದೆ. ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್‌) ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧಿನಕ್ಕೆ ತೆಗೆದುಕೊಳ್ಳುವಲ್ಲಿ ಹಣದ ಅಕ್ರಮ ವರ್ಗಾವಣೆ ನಡೆಸಿರುವುದನ್ನು ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿದೆ.

‘ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ಸವಾಲುಗಳು ಎದುರಾಗಿದ್ದವು. ಆದರೆ ಪ್ರಕ್ರಿಯೆಗಳನ್ನು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿವೆ. ಇದರಿಂದಾಗಿ ತನಿಖೆಯು ಮುಂದುವರಿಯಿತು’ ಎಂದು ಇ.ಡಿ ಹೇಳಿದೆ.

ನ್ಯಾಷನಲ್ ಹೆರಾಲ್ಡ್ ಮಾಧ್ಯಮ ಸಂಸ್ಥೆಯ (ಪತ್ರಿಕೆ ಮತ್ತು ವೆಬ್‌ ತಾಣ) ಪ್ರಕಾಶನ ಸಂಸ್ಥೆ ಎಜೆಎಲ್‌. ಇದರ ಮಾಲೀಕತ್ವವನ್ನು ಯಂಗ್ ಇಂಡಿಯನ್ ಪ್ರೈ.ಲಿ. ಹೊಂದಿದೆ. ಯಂಗ್ ಇಂಡಿಯನ್ ಕಂಪನಿಯಲ್ಲಿ ತಲಾ ಶೇಕಡ 38ರಷ್ಟು ಷೇರುಗಳನ್ನು ಸೋನಿಯಾ ಮತ್ತು ರಾಹುಲ್ ಹೊಂದಿದ್ದಾರೆ.

ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಕೆಲವು ವರ್ಷಗಳ ಹಿಂದೆ ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿತ್ತು.

ಸೋನಿಯಾ ಮತ್ತು ರಾಹುಲ್ ಅವರ ಒಡೆತನದ ಖಾಸಗಿ ಕಂಪನಿಯಾದ ಯಂಗ್ ಇಂಡಿಯನ್‌, ಎಜೆಎಲ್‌ಗೆ ಸೇರಿದ ₹2,000 ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ ₹50 ಲಕ್ಷಕ್ಕೆ ತನ್ನದಾಗಿಸಿಕೊಂಡಿದೆ ಎಂಬುದು ತನಿಖೆಯಿಂದ ನಿರ್ಣಾಯಕವಾಗಿ ತಿಳಿದುಬಂದಿದೆ ಎಂದು ಇ.ಡಿ. ಹೇಳಿದೆ.

‘₹18 ಕೋಟಿ ಮೊತ್ತದ ನಕಲಿ ಡೊನೇಷನ್, ₹38 ಕೋಟಿ ಮೊತ್ತದ ನಕಲಿ ಮುಂಗಡ ಬಾಡಿಗೆ, ₹29 ಕೋಟಿ ಮೊತ್ತದ ನಕಲಿ ಜಾಹೀರಾತು ಹಣಕ್ಕೆ ಯಂಗ್ ಇಂಡಿಯನ್ ಮತ್ತು ಎಜೆಎಲ್‌ನ ಆಸ್ತಿಗಳನ್ನು ಮೂಲವೆಂದು ತೋರಿಸಲಾಗಿದೆ’ ಎಂದು ಇ.ಡಿ ಆರೋಪಿಸಿದೆ.

ದ್ವೇಷದ ರಾಜಕಾರಣ: ಕಾಂಗ್ರೆಸ್ ಕಿಡಿ

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಇ.ಡಿ ದೋಷಾರೋಪ ಪಟ್ಟಿ ಸಲ್ಲಿಸಿರುವುದನ್ನು ಕಾಂಗ್ರೆಸ್ ಪಕ್ಷವು ‘ದ್ವೇಷದ ರಾಜಕಾರಣ’ ಎಂದು ಕರೆದಿದೆ. ನ್ಯಾಷನಲ್‌ ಹೆರಾಲ್ಡ್‌ಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ‘ಕಾನೂನು ಕ್ರಮದ ಹೆಸರಿನಲ್ಲಿ ನಡೆದಿರುವ ಸರ್ಕಾರಿ ಪ್ರಾಯೋಜಿತ ಅಪರಾಧ’ ಎಂದು ಬಣ್ಣಿಸಿದೆ. ‘ಸೋನಿಯಾ ರಾಹುಲ್ ಮತ್ತು ಇತರ ಕೆಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ದ್ವೇಷದ ರಾಜಕಾರಣ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಬೆದರಿಕೆ ತಂತ್ರವು ನಿಯಂತ್ರಣ ಕಳೆದುಕೊಂಡಿರುವುದನ್ನು ತೋರಿಸುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವದ ಬಾಯಿ ಮುಚ್ಚಿಸಲು ಆಗುವುದಿಲ್ಲ ಸತ್ಯವು ಜಯ ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೋರ್ಟ್‌ ಸೂಚನೆ ಆಧರಿಸಿ ಕ್ರಮ: ಬಿಜೆಪಿ

ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಸಾರ್ವಜನಿಕರ ಆಸ್ತಿಯ ಲೂಟಿಯಲ್ಲಿ ಭಾಗಿಯಾಗಿದ್ದವರು ಈಗ ಅದನ್ನು ಮರಳಿಸಬೇಕಾಗಿದೆ ಎಂದು ಬಿಜೆಪಿಯು ಹೇಳಿದೆ. ಸಾರ್ವಜನಿಕರ ಹಣದ ಲೂಟಿಯಲ್ಲಿ ತೊಡಗಿದ ನಂತರದಲ್ಲಿ ಕಾಂಗ್ರೆಸ್ಸಿನ ನಾಯಕರು ತಾವೇ ಸಂತ್ರಸ್ತರು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ ಎಂದು ಕೂಡ ಬಿಜೆಪಿ ಲೇವಡಿ ಮಾಡಿದೆ. ಇ.ಡಿ ಕ್ರಮವು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಹೇಳಿರುವುದನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ಕ್ರಮ ಆರಂಭವಾಯಿತು ಎಂದು ನೆನಪಿಸಿದ್ದಾರೆ. ‘ಅಂದರೆ ಅವರ ಮಾತಿನ ಅರ್ಥ ಕೋರ್ಟ್‌ ಕೂಡ ದ್ವೇಷದ ಆಧಾರದಲ್ಲಿ ಕ್ರಮ ಕೈಗೊಂಡಿದೆ ಎಂದೇ’ ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.