ADVERTISEMENT

National Water Awards: ಮಹಾರಾಷ್ಟ್ರ ನಂಬರ್ 1, ‘ಆರ್ಟ್ ಆಫ್ ಲಿವಿಂಗ್‌’ಗೆ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2025, 10:28 IST
Last Updated 11 ನವೆಂಬರ್ 2025, 10:28 IST
<div class="paragraphs"><p>ಆರ್ಟ್ ಆಫ್ ಲಿವಿಂಗ್‌, ನಗರ ಪ್ರದೇಶದ ಕೆರೆ</p></div>

ಆರ್ಟ್ ಆಫ್ ಲಿವಿಂಗ್‌, ನಗರ ಪ್ರದೇಶದ ಕೆರೆ

   

ನವದೆಹಲಿ: ಜಲಸಂರಕ್ಷಣೆಗಾಗಿ ಕೇಂದ್ರ ಜಲಶಕ್ತಿ ಸಚಿವಾಲಯ ಕೊಡಮಾಡುವ 2024 ನೇ ಸಾಲಿನ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳು ಘೋಷಣೆಯಾಗಿವೆ.

ಜಲಸಂರಕ್ಷಣೆ ಹಾಗೂ ಸೂಕ್ತ ನಿರ್ವಹಣೆಗಾಗಿ ದೇಶದಲ್ಲಿ ಮಹಾರಾಷ್ಟ್ರ ನಂಬರ್– 1 ರಾಜ್ಯವಾಗಿ ಹೊರಹೊಮ್ಮಿದ್ದು, ಗುಜರಾತ್ ಎರಡನೇ ಸ್ಥಾನ ಹಾಗೂ ಹರಿಯಾಣ ಮೂರನೇ ಸ್ಥಾನ ಪಡೆದಿವೆ.

ADVERTISEMENT

ಇಂದು ನವದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ ಅವರು ಈ ಪ್ರಶಸ್ತಿಗಳನ್ನು ಘೋಷಿಸಿದರು. ವಿವಿಧ 10 ವಿಭಾಗಗಳಲ್ಲಿ 46 ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅತ್ಯುತ್ತಮ ಜಿಲ್ಲೆ, ನಗರ ಪಾಲಿಕೆ, ಗ್ರಾಮ ಪಂಚಾಯಿತಿ, ಕೈಗಾರಿಕೆ, ನಾಗರಿಕ ಸಮಾಜ, ಶಾಲೆ–ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಹೀಗೆ 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ಜಿಲ್ಲೆ ವಿಭಾಗದ ದಕ್ಷಿಣ ವಲಯದಲ್ಲಿ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆ ಪ್ರಶಸ್ತಿ ಪಡೆದಿದೆ. ಅತ್ಯುತಮ ನಗರ ಪಾಲಿಕೆಯಲ್ಲಿ ನವೀ ಮುಂಬೈ ಸ್ಥಾನ ಪಡೆದಿದೆ.

ಆಂಧ್ರಪ್ರದೇಶದ ರಾಯಲ್‌ಸೀಮಾ ಭಾಗದ ಅಣ್ಣಮ್ಮಯ್ಯ ಜಿಲ್ಲೆಯ (ರಾಯಚೋಟಿ) ದುಬ್ಬಿಗಾನಿಪಲ್ಲಿ ಗ್ರಾಮ ಪಂಚಾಯಿತಿ ಜಲಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ.

ದಕ್ಷಿಣ ಭಾರತದಲ್ಲಿ ತಮಿಳುನಾಡು ರಾಜ್ಯಕ್ಕೆ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದು, ಕರ್ನಾಟಕಕ್ಕೆ 9 ವಿಭಾಗಗಳಲ್ಲಿಯೂ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ವಿಶೇಷ ಎಂದರೆ ಜಲಸಂರಕ್ಷಣೆಯ ‘ಬೆಸ್ಟ್ ಸಿವಿಲ್ ಸೊಸೈಟಿ’ ವಿಭಾಗದಲ್ಲಿ ಬೆಂಗಳೂರಿನ ‘ಆರ್ಟ್ ಆಫ್ ಲಿವಿಂಗ್‌’ ಸಂಸ್ಥೆಗೆ ತೃತೀಯ ಬಹುಮಾನ ಬಂದಿದೆ.

ಈ ಪ್ರಶಸ್ತಿಗಳಿಗೆ 2024 ಅಕ್ಟೋಬರ್ ಮೊದಲು Rashtriya Puraskar Portal ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿಯನ್ನು ಪರಿಶೀಲಿಸಿದ ನಂತರ ಜಲಶಕ್ತಿ ಮಂತ್ರಾಲಯದ ಜಲಸಂಪನ್ಮೂಲ ಇಲಾಖೆಯ ಅಡಿ ’ಕೇಂದ್ರ ಜಲ ಆಯೋಗ’ ಮತ್ತು ‘ಕೇಂದ್ರ ಅಂತರ್ಜಲ ಮಂಡಳಿ’ಯ ಅಧಿಕಾರಿಗಳು ಸ್ಥಳ ಭೇಟಿ, ಮುಂತಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಫಲಾನುಭವಿಗಳನ್ನು ಗುರುತಿಸಿದ್ದಾರೆ.

ಪ್ರಶಸ್ತಿ ಪುರಸೃತರಿಗೆ ಇಲಾಖೆಯಿಂದ ನಗದು ಬಹುಮಾನ, ಸ್ಮರಣಿಕೆ ಹಾಗೂ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ. ನವೆಂಬರ್ 18 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಸಿ.ಆರ್. ಪಾಟೀಲ ತಿಳಿಸಿದರು.

ಕೇಂದ್ರ ಸರ್ಕಾರದ ‘ಜಲ ಸಮೃದ್ಧಿ ಭಾರತ್ ಯೋಜನೆ’ಯ ಅಂಗವಾಗಿ 2018ರಿಂದ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.