
ರಾಣಿ ಚನ್ನಮ್ಮ ಕಿರು ಮೃಗಾಲಯ
ನವದೆಹಲಿ: ಇಲ್ಲಿಯ ಪ್ರಸಿದ್ಧ ರಾಷ್ಟ್ರೀಯ ವನ್ಯಜೀವಿ ಪಾರ್ಕ್ ವಿನೂತನ ಆಲೋಚನೆಯೊಂದಿಗೆ ಒಂದು ದಿನಕ್ಕೂ ಪ್ರಾಣಿಗಳ ದತ್ತು ಪಡೆಯಲು ಅವಕಾಶ ಕಲ್ಪಿಸಿದೆ.
ಸಾಮಾನ್ಯವಾಗಿ ಇತರೆ ಪ್ರಾಣಿ ಸಂಗ್ರಹಾಲಯಗಳಲ್ಲಿ ವರ್ಷಕ್ಕೆ ಇಲ್ಲವೇ ತಿಂಗಳ ಕಾಲ ಪ್ರಾಣಿ, ಪಕ್ಷಿಗಳ ದತ್ತು ಪಡೆಯಲು ಅವಕಾಶವಿದೆ. ಇಲ್ಲಿ ಒಂದು ದಿನಕ್ಕೂ ದತ್ತು ಪಡೆಯಬಹುದು. ಸಣ್ಣ ಪ್ರಾಣಿ ಅಥವಾ ಪಕ್ಷಿಗೆ ಕೇವಲ ₹ 500 ರಿಂದ ಹುಲಿಗೆ ₹ 50 ಸಾವಿರದವರೆಗೆ ನೀಡಬೇಕಾಗಬಹುದು ಎಂದು ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಸಂಜೀತ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ನಿಗದಿಪಡಿಸಿರುವ ವಾರ್ಷಿಕ ದತ್ತು ದರವನ್ನು ಆಧರಿಸಿ ದಿನದ ದತ್ತು ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಯೋಜನೆಯು ಈ ತಿಂಗಳಲ್ಲಿ ಅಂತಿಮವಾಗಲಿದ್ದು ಮಾರ್ಚ್‌ನಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಚುಕ್ಕೆ ಜಿಂಕೆಯ ವಾರ್ಷಿಕ ದತ್ತು ಶುಲ್ಕ ₹ 18000 ನಿಗದಿಪಡಿಸಲಾಗಿದೆ. ಇದರ ದಿನದ ದತ್ತು ಶುಲ್ಕ ₹ 500 ಆಗಬಹುದು. ಇದೇ ರೀತಿ ಹುಲಿಯ ವಾರ್ಷಿಕ ದತ್ತು ಶುಲ್ಕ ಆರು ಲಕ್ಷ ರೂಪಾಯಿ. ಇದರ ದಿನದ ದತ್ತು ಶುಲ್ಕ ₹ 50,000 ಎಂದು ಕುಮಾರ್ ತಿಳಿಸಿದರು.
ಹುಟ್ಟುಹಬ್ಬ, ವಾರ್ಷಿಕೋತ್ಸವ ಸೇರಿದಂತೆ ಯಾವುದೇ ನೆನಪಿನಲ್ಲಿ ಉಳಿಯಬಹುದಾದ ದಿನಗಳಲ್ಲಿ ಪ್ರಾಣಿಗಳ ದತ್ತು ಪಡೆಯಬಹುದು. ವಾರ್ಷಿಕ ಮೊತ್ತ ನೀಡಿ ದತ್ತು ಪಡೆಯಲು ಕಷ್ಟ ಎಂದು ಹಲವರು ಹೇಳುತ್ತಿದ್ದ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರಿಂದ ಮೃಗಾಲಯಕ್ಕೆ ಮತ್ತಷ್ಟು ಹಣ ಹರಿದುಬರಬಹುದು. ಈ ಹಣವನ್ನು ಪ್ರಾಣಿಗಳ ಆಹಾರ, ಆರೋಗ್ಯ ಸುಧಾರಣೆಗೆ ಬಳಸಲಾಗುತ್ತದೆ.
ದತ್ತು ಪಡೆಯುವವರಿಗೆ ಪ್ರಮಾಣ ಪತ್ರ ಹಾಗೂ ಜ್ಞಾಪಕಕ್ಕಾಗಿ ಪ್ರಾಣಿಯ ಚಿತ್ರವನ್ನು ನೀಡಲಾಗುತ್ತದೆ.
ಈ ಮೃಗಾಲಯದಲ್ಲಿ 2022ರಿಂದಲೇ ವಾರ್ಷಿಕ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಶುಲ್ಕದ ಪ್ರಮಾಣ ಹೆಚ್ಚಾದ ಕಾರಣದಿಂದ ದತ್ತು ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ.
ಕರ್ನಾಟಕದಲ್ಲೂ ಮೃಗಾಲಯ ಪ್ರಾಧಿಕಾರದಿಂದ ಮೈಸೂರು, ಬೆಂಗಳೂರು, ಶಿವಮೊಗ್ಗ, ಗದಗ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಒಂಬತ್ತು ಕಡೆ ಮೃಗಾಲಯವಿದೆ. ಈ ಎಲ್ಲಾ ಕಡೆಯೂ ವಾರ್ಷಿಕ ದತ್ತು ಸ್ವೀಕಾರ ಮಾತ್ರ ನಡೆಯುತ್ತಿದೆ.
ಈ ಮೃಗಾಲಯಗಳಲ್ಲೂ ದಿನದ ಲೆಕ್ಕದಲ್ಲಿ ದತ್ತು ಸ್ವೀಕಾರ ಜಾರಿಯಾದರೆ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.