ADVERTISEMENT

ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಬಿಡದಿದ್ದರೆ ಸೂಕ್ತ ಉತ್ತರ: ನವಜೋತ್ ಸಿಂಗ್

ಪಿಟಿಐ
Published 27 ಆಗಸ್ಟ್ 2021, 10:47 IST
Last Updated 27 ಆಗಸ್ಟ್ 2021, 10:47 IST
ನವಜೋತ್ ಸಿಂಗ್ ಸಿಧು (ಪಿಟಿಐ ಚಿತ್ರ)
ನವಜೋತ್ ಸಿಂಗ್ ಸಿಧು (ಪಿಟಿಐ ಚಿತ್ರ)   

ಚಂಡೀಗಡ: ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಉತ್ತರ ನೀಡಲಿದ್ದೇನೆ ಎಂದು ಕಾಂಗ್ರೆಸ್‌ನ ಪಂಜಾಬ್‌ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಮೃತಸರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಿಯಮಗಳು ಮತ್ತು ಸಂವಿಧಾನಕ್ಕೆ ಬದ್ಧರಾಗಿ ಸ್ವಯಂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಇದೆ ಎಂದು ಹೇಳಿದ್ದಾರೆ.

ಹೈಕಮಾಂಡ್ ತಮಗೆ ಸ್ವಾತಂತ್ರ್ಯ ನೀಡಬೇಕು ಎಂದು ಈ ಹಿಂದೆ ಹೇಳಿದ್ದ ಸಿಧು, ರಾಜ್ಯದಲ್ಲಿ ಮುಂದಿನ 20 ವರ್ಷಗಳವರೆಗೆ ಪಕ್ಷಕ್ಕೆ ಅಧಿಕಾರ ದೊರೆಯುವುದನ್ನು ಖಾತರಿಪಡಿಸಬಲ್ಲೆ. ಇದಕ್ಕಾಗಿ ಯೋಜನೆಯನ್ನೂ ರೂಪಿಸಿಕೊಂಡಿದ್ದೇನೆ ಎಂದು ಹೇಳಿದ್ದರು.

ADVERTISEMENT

ಸಿಧು ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ನಿರ್ಧಾರ ಕೈಗೊಳ್ಳದಿದ್ದರೆ ಬೇರೆ ಯಾರು ಕೈಗೊಳ್ಳುತ್ತಾರೆ ಎಂದು ಕೇಳಿದ್ದಾರೆ.

‘ಸಿಧು ಅವರು ಯಾವ ದೃಷ್ಟಿಕೋನದಿಂದ ಆ ಹೇಳಿಕೆ ನೀಡಿದ್ದಾರೆ ಎಂಬುದನ್ನು ಗಮನಿಸಬೇಕಿದೆ. ಸಿಧು ಅವರು ಪಂಜಾಬ್ ಘಟಕದ ಗೌರವಾನ್ವಿತ ಅಧ್ಯಕ್ಷರು. ರಾಜ್ಯ ಘಟಕದ ಅಧ್ಯಕ್ಷರು ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ಮತ್ಯಾರು ಆ ಕೆಲಸ ಮಾಡುತ್ತಾರೆ’ ಎಂದು ರಾವತ್ ಹೇಳಿದ್ದಾರೆ.

ಪಕ್ಷದ ನಿಯಮಗಳಿಗೆ ಅನುಸಾರವಾಗಿ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯ ಘಟಕಗಳ ಅಧ್ಯಕ್ಷರು ಸ್ವತಂತ್ರರು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಬಂಡಾಯದ ಧ್ವನಿ ಹೆಚ್ಚಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ನವಜೋತ್‌ ಸಿಂಗ್‌ ಸಿಧು ಅವರ ಸಲಹೆಗಾರ ಮಾಲ್ವಿಂದರ್ ಸಿಂಗ್‌ ಮಾಲಿ ತಮ್ಮ ಸ್ಥಾನದಿಂದ ಹೊರ ಬಂದಿದ್ದಾರೆ. ವಿವಾದಗಳಿಗೆ ಕಾರಣರಾಗುತ್ತಿರುವ ಇಬ್ಬರು ಸಲಹೆಗಾರರನ್ನು ಸ್ಥಾನದಿಂದ ತೆಗೆದು ಹಾಕುವಂತೆ ಸಿಧು ಅವರಿಗೆ ಎಐಸಿಸಿ ಪಂಜಾಬ್‌ನ ಉಸ್ತುವಾರಿ ವಹಿಸಿರುವ ಹರೀಶ್‌ ರಾವತ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.