ADVERTISEMENT

₹1.1 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲ್ ನಾಯಕ ಗಣೇಶ್ ಉಯಿಕೆ ಸೇರಿ ಐವರ ಹತ್ಯೆ

ಪಿಟಿಐ
Published 25 ಡಿಸೆಂಬರ್ 2025, 10:00 IST
Last Updated 25 ಡಿಸೆಂಬರ್ 2025, 10:00 IST
   

ಭುವನೇಶ್ವರ: ಒಡಿಶಾದ ಕಂಧಮಾಲ್‌ನಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ನಕ್ಸಲ್ ನಾಯಕ ಗಣೇಶ್ ಉಯಿಕೆ ಸೇರಿದಂತೆ 4 ಮಂದಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾದ ಉಯಿಕೆ ಬಗ್ಗೆ ಮಾಹಿತಿ ನೀಡಿದವರಿಗೆ ₹1.1 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಅಧಿಕಾರಿ ತಿಳಿಸಿದ್ದಾರೆ.

ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ.

ADVERTISEMENT

‘ಗುಂಡಿನ ಕಾಳಗದಲ್ಲಿ ಹತನಾದ ಒಬ್ಬ ನಕ್ಸಲನನ್ನು 69 ವರ್ಷದ ಉಯಿಕೆ ಎಂದು ಗುರುತಿಸಲಾಗಿದೆ. ಗಣೇಶ್‌ ಅವರನ್ನು ಪಕ್ಕಾ ಹನುಮಂತು, ರಾಜೇಶ್‌ ತಿವಾರಿ, ಚರ್ಮು ಮತ್ತು ರೂಪ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. ಗಣೇಶ್ ಅವರು ತೆಲಂಗಾಣದ ಚೆಂದೈರ್ ಮಂಡಲದ ಪುಲ್ಲೆಮಲ ಹಳ್ಳಿಯ ನಿವಾಸಿಯಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಉಳಿದ ನಾಲ್ವರು ನಕ್ಸಲರ ಮೂಲ ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ನಕ್ಸಲ್ ಮುಕ್ತ ಭಾರತದತ್ತ ಮಹತ್ವದ ಮೈಲಿಗಲ್ಲು’ ಎಂದು ಬಣ್ಣಿಸಿದ್ದಾರೆ.

ಈ ಕಾರ್ಯಾಚರಣೆಯ ಮೂಲಕ ಒಡಿಶಾ ಸಂಪೂರ್ಣ ನಕ್ಸಲ್ ಮುಕ್ತ ರಾಜ್ಯವಾಗುವತ್ತ ಸಾಗಿದೆ. ಮಾರ್ಚ್ 31ರ ಹೊತ್ತಿಗೆ ಇದನ್ನು ಸಾಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.