ADVERTISEMENT

ನಕ್ಸಲ್‌ ನಾಯಕ ಪ್ರಭಾಕರ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 14:48 IST
Last Updated 7 ಫೆಬ್ರುವರಿ 2026, 14:48 IST
.
.   

ಮುಂಬೈ: ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ನಡೆದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ನಕ್ಸಲ್‌ ನಾಯಕ ಪ್ರಭಾಕರ್‌ ರಾವ್ ಅಲಿಯಾಸ್‌ ಲೋಕೇಟಿ ಚಂದರ್‌ ರಾವ್‌ ಸೇರಿ ಏಳು ಮಂದಿಯನ್ನು ಹತ್ಯೆಗೈಯಲಾಗಿದೆ.

ಪ್ರಭಾಕರ್ ಸಿಪಿಎಂ ಸಂಘಟನೆಯ ಅತ್ಯುನ್ನತ ಶ್ರೇಣಿಯ ನಾಯಕರಲ್ಲಿ ಒಬ್ಬನಾಗಿದ್ದ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಇಸ್ರೊಜಿವಾಡಿ ಗ್ರಾಮದ ಪ್ರಭಾಕರ್‌ನನ್ನು ರವಿ, ಸ್ವಾಮಿ, ಚಂದರ್‌, ರಾವ್‌ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು.

ಪ್ರಭಾಕರ್‌ ಸುಳಿವು ನೀಡಿದವರಿಗೆ ₹25 ಸಾವಿರ ಬಹುಮಾನ ಘೋಷಿಸಲಾಗಿತ್ತು. 73 ಎನ್‌ಕೌಂಟರ್, 13 ಕೊಲೆ ಮತ್ತಿತರ 21 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ADVERTISEMENT

ಖಚಿತ ಮಾಹಿತಿ ಮೇರೆಗೆ ಫೆಬ್ರುವರಿ 4ರಂದು ಮಹಾರಾಷ್ಟ್ರ–ಛತ್ತೀಸಗಢದ ಗಡಿಯಲ್ಲಿನ ಅಬೂಝಮಾಡ್ ಅರಣ್ಯದಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ನಕ್ಸಲರು ಹಠಾತ್‌ ದಾಳಿ ನಡೆಸಿದ್ದರು. ಪ್ರತಿದಾಳಿ ನಡೆಸಿದ ಪೊಲೀಸರು ನಕ್ಸಲರ ಎರಡು ಶಿಬಿರಗಳನ್ನು ನಾಶಗೊಳಿಸಿ, ಅವರಿಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ನಕ್ಸಲರನ್ನು ಆ ದಿನ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಮರುದಿನ ಕಾರ್ಯಾಚರಣೆಯನ್ನು ಮುಂದುವರಿಸಲಾಗಿತ್ತು. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದವು. ಜೊತೆಗೆ ಸ್ಥಳದಲ್ಲಿದ್ದ ಎಕೆ–47 ಸೇರಿದಂತೆ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿತ್ತು. ಫೆ.6ರಂದು ನಡೆದ ಕಾರ್ಯಾಚರಣೆಯಲ್ಲಿ ಮತ್ತೆ ನಾಲ್ವರು ನಕ್ಸಲರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.