
ಪಶ್ಚಿಮ ಬಂಗಾಳದ ನಕ್ಸಲ್ಬಾರಿ ಎಂಬಲ್ಲಿ (1967) ಮಾವೋ ಚಿಂತನೆಗಳಿಂದ ಪ್ರೇರಿತರಾಗಿದ್ದ ಕಮ್ಯುನಿಸ್ಟ್ ಮುಖಂಡರಿಂದ ಆರಂಭವಾಗಿದ್ದ ನಕ್ಸಲ್ ಚಳವಳಿ ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸಗಢ, ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಗೆ ಹರಡಿತ್ತು. 2004ರಲ್ಲಿ ಪೀಪಲ್ಸ್ ವಾರ್ ಗ್ರೂಪ್, ಮಾವೋಯಿಸ್ಟ್ ಕಮ್ಯುನಿಸ್ಟ್ ಸೆಂಟ್ ಆಫ್ ಇಂಡಿಯಾ ವಿಲೀನಗೊಂಡು ಸಿಪಿಐ (ಮಾವೋಯಿಸ್ಟ್) ರೂಪುಗೊಂಡ ನಂತರ ಅವರ ಬಲರ್ವಧನೆಯಾಗಿತ್ತು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಕ್ಸಲ್ ದಮನಕ್ಕೆ ವಿಶೇಷ ಕಾರ್ಯಾಚರಣೆಗಳನ್ನು ಆರಂಭಿಸಿತು. 2014ರಲ್ಲಿ 126 ಜಿಲ್ಲೆಗಳಿಗೆ ವ್ಯಾಪಿಸಿದ್ದ ನಕ್ಸಲರು, 2025ಕ್ಕೆ 11 ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ; 2013ರಲ್ಲಿ 330 ನಕ್ಸಲ್ ಪ್ರಕರಣಗಳು ವರದಿಯಾಗಿದ್ದರೆ, 2025ರಲ್ಲಿ 52 ಪ್ರಕರಣಗಳು ಮಾತ್ರವೇ ವರದಿಯಾಗಿವೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳುತ್ತವೆ.
2025ರಲ್ಲಿ ಒಟ್ಟು 317 ನಕ್ಸಲರನ್ನು ಹತ್ಯೆ ಮಾಡಲಾಗಿದೆ, 862 ಮಂದಿಯನ್ನು ಬಂಧಿಸಲಾಗಿದೆ ಮತ್ತು 1,973 ಮಂದಿ ಶರಣಾಗತರಾಗಿದ್ದಾರೆ. ನಂಬಾಲ ಕೇಶವ ರಾವ್ ಅಲಿಯಾಸ್ ಬಸವರಾಜು, ಮಾಡವಿ ಹಿಡ್ಮಾ ಸೇರಿದಂತೆ ಕೇಂದ್ರ ಸಮಿತಿಯ ಕನಿಷ್ಠ 9 ಮಂದಿ ಸದಸ್ಯರು ಈ ವರ್ಷ ಪೊಲೀಸರಿಂದ ಹತರಾಗಿದ್ದಾರೆ. ರೂಪೇಶ್, ಮಲ್ಲೋಜುಲ ವೇಣುಗೋಪಾಲ, ಪೋತುಲ ಪದ್ಮಾವತಿ, ಪುಲ್ಲೂರಿ ಪ್ರಸಾದ್ ರಾವ್ ಮುಂತಾದ ಪ್ರಮುಖರು ಶರಣಾಗಿದ್ದಾರೆ. ಕೇಂದ್ರ ಸಮಿತಿಯಲ್ಲಿ ಒಟ್ಟು 34 ಮಂದಿ ಸದಸ್ಯರು ಇರಬೇಕು. ಆದರೆ, ಪ್ರಸ್ತುತ 9 ಮಂದಿ ಮಾತ್ರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ನಕ್ಸಲ್ ಸಂಬಂಧಿತ ಹಿಂಸಾಚಾರದಲ್ಲಿ 2000ದಿಂದ 2025ರವರೆಗೆ 4,944 ನಕ್ಸಲರು, 4,131 ನಾಗರಿಕರು, 2,718 ಪೊಲೀಸರು ಸಾವಿಗೀಡಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ನಕ್ಸಲರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.