ADVERTISEMENT

ಛತ್ತೀಸಗಢ: ಮತ್ತೆ 23 ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ

ಪಿಟಿಐ
Published 12 ಜುಲೈ 2025, 11:30 IST
Last Updated 12 ಜುಲೈ 2025, 11:30 IST
<div class="paragraphs"><p>ನಕ್ಸಲರು</p></div>

ನಕ್ಸಲರು

   

ಸುಕ್ಮಾ, ಛತ್ತೀಸಗಢ: ಇಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಮೂವರು ದಂಪತಿ ಸೇರಿದಂತೆ 23 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ ಸರ್ಕಾರವು ₹1.18 ಕೋಟಿ ನಗದು ಬಹುಮಾನ ಘೋಷಿಸಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಶರಣಾದವರಲ್ಲಿ 11 ಮಂದಿ ಹಿರಿಯ ಕಾರ್ಯಕರ್ತರಾಗಿದ್ದು, ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿ(ಪಿಜಿಎಲ್‌ಎ) 1ನೇ ಬೆಟಾಲಿಯನ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದನ್ನು ಮಾವೋವಾದಿಗಳ ಅತ್ಯಂತ ಶಕ್ತಿಶಾಲಿಯಾದ ಸೇನಾ ವಿಭಾಗವೆಂದೇ ಪರಿಗಣಿಸಲಾಗುತ್ತಿತ್ತು’ ಎಂದು ಹೇಳಿದ್ದಾರೆ. 

ADVERTISEMENT

ಶರಣಾಗದವರಲ್ಲಿ 9 ಮಂದಿ ಮಹಿಳೆಯರು ಇದ್ದಾರೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿರಣ್‌ ಚವ್ಹಾಣ್‌ ತಿಳಿಸಿದ್ದಾರೆ.

ಲೋಕೇಶ್‌ ಅಲಿಯಾಸ್‌ ಭೀಮಾ (35), ರಮೇಶ್‌ ಅಲಿಯಾಸ್‌ ಕಲ್ಮಾ(23), ಕವಾಸಿ ಮಾಸ (35), ಮದಕಂ ಹುಂಗಾ (23), ನುಪ್ಪೊ ಗಂಗಿ (28), ಪುನೆಂ ದೆವೆ (30), ಪರಸ್ಕಿ ಪಾಂಡೆ (22), ಮಾಧ್ವಿ ಜೊಗಾ (20), ನುಪ್ಪೊ ಲಚ್ಚೂ (25), ಪೊದಿಯಂ ಸುಖರಾಂ (24) ಹಾಗೂ ದುಧಿ ಭೀಮಾ ಅವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು.

‘ಸಂಘಟನೆಯ ವಿಭಾಗೀಯ ಸಮಿತಿ ಸದಸ್ಯರಾಗಿದ್ದ ಲೋಕೇಶ್‌ ಹಾಗೂ 8 ಮಂದಿ ಸೇರಿಕೊಂಡು ಪಿಜಿಎಲ್‌ಯ ಬೆಟಾಲಿಯನ್‌ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಸಂಘಟನೆಯು ದುರ್ಬಲವಾಗಿದ್ದು, ನಕ್ಸಲ್‌ ನಿಗ್ರಹ ಕಾರ್ಯಾಚರಣೆಯ ಬಳಿಕ ಸಂಘಟನೆಯ ಬಲ ಕ್ಷೀಣಿಸಿದೆ’ ಎಂದು ಚವ್ಹಾಣ್‌ ಹೇಳಿದ್ದಾರೆ.

ಉಳಿದ ನಾಲ್ಕು ಕಾರ್ಯಕರ್ತರ ಮೇಲೆ ತಲಾ ₹5 ಲಕ್ಷ, ಒಬ್ಬನಿಗೆ ₹3 ಲಕ್ಷ ಹಾಗೂ ಏಳು ಕಾರ್ಯಕರ್ತರ ಸುಳಿವು ನೀಡಿದವರಿಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ತಲಾ ₹50 ಸಾವಿರ ನೆರವು: ‘ಶರಣಾದ ನಕ್ಸಲರು ಸುಕ್ಮಾ ಜಿಲ್ಲೆಯ ಜಗರ್‌ಗುಂಡಾ, ಕೆರ್ಲಾಪಲ್‌ ಹಾಗೂ ಅಮ್ದಾಯಿ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅವರೆಲ್ಲರಿಗೂ ಸರ್ಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ತಲಾ ₹50 ಸಾವಿರ ನಗದು ಹಾಗೂ ಇನ್ನಿತರ ನೆರವು ನೀಡಲಾಗುವುದು’ ಎಂದು ಎಸ್ಪಿ ಕಿರಣ್‌ ಚವ್ಹಾಣ್‌ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.