ADVERTISEMENT

ದೇಶದಲ್ಲಿ ‘ನಕ್ಸಲಿಸಂ’ ಶೀಘ್ರವೇ ಇತಿಹಾಸ ಪುಟ ಸೇರಲಿದೆ: ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:25 IST
Last Updated 21 ಅಕ್ಟೋಬರ್ 2025, 6:25 IST
<div class="paragraphs"><p>ರಾಜನಾಥ್ ಸಿಂಗ್</p></div>

ರಾಜನಾಥ್ ಸಿಂಗ್

   

–ಪಿಟಿಐ ಚಿತ್ರ

ನವದೆಹಲಿ: ದೇಶದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಪ್ರಯತ್ನದಿಂದಾಗಿ ಎಡಪಂಥೀಯ ಉಗ್ರವಾದವು (ನಕ್ಸಲಿಸಂ) ಶೀಘ್ರದಲ್ಲೇ ಇತಿಹಾಸ ಪುಟ ಸೇರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಇದೇ ವೇಳೆ ಭದ್ರತಾ ಪಡೆ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಒಂದು ಕಾಲದಲ್ಲಿ ಸರ್ಕಾರಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ ಮಾವೋವಾದಿಗಳು ಇಂದು ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇದರೊಂದಿಗೆ ನಕ್ಸಲ್‌ ವಿರುದ್ಧದ ಕಾರ್ಯಾಚರಣೆಯ ಯಶಸ್ಸನ್ನು ನಾವು ನಿರ್ಣಯಿಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ದೀರ್ಘಕಾಲದಿಂದ ‘ನಕ್ಸಲಿಸಂ’ ನಮ್ಮ ಆಂತರಿಕ ಭದ್ರತೆಗೆ ಸಮಸ್ಯೆಯಾಗಿದೆ. ಛತ್ತೀಸಗಢ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಅನೇಕ ಜಿಲ್ಲೆಗಳು ನಕ್ಸಲ್ ಚಟುವಟಿಕೆಗಳಿಂದ ಪ್ರಭಾವಿತವಾಗಿದ್ದ ಕಾಲವಿತ್ತು. ಆಗ ಹಳ್ಳಿಗಳಲ್ಲಿನ ಶಾಲೆಗಳು ಬಂದ್ ಮಾಡಲಾಗಿತ್ತು. ಜನರು ಭಯದಿಂದ ವಾಸಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡಲು ನಾವು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಪೊಲೀಸರು, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸ್ಥಳೀಯ ಆಡಳಿತವು ಸಂಘಟಿತ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವ ರೀತಿ ಶ್ಲಾಘನೀಯ’ ಎಂದು ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಒಂದು ಕಾಲದಲ್ಲಿ ನಕ್ಸಲ್ ಕೇಂದ್ರಗಳಾಗಿದ್ದ ಪ್ರದೇಶಗಳು ಈಗ ಶೈಕ್ಷಣಿಕ ಕೇಂದ್ರಗಳಾಗಿ ಬದಲಾಗುತ್ತಿವೆ. ಒಂದು ಕಾಲದಲ್ಲಿ ‘ರೆಡ್‌ ಕಾರಿಡಾರ್’ ಎಂದು ಕುಖ್ಯಾತಿ ಪಡೆದಿದ್ದ ಭಾರತದ ಭಾಗಗಳು ಈಗ ಬೆಳವಣಿಗೆಯ ಕಾರಿಡಾರ್ ಆಗಿ ರೂಪಾಂತರಗೊಂಡಿವೆ. ಇದಕ್ಕಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಮಹತ್ವದ ಕೊಡುಗೆ ನೀಡಿವೆ’ ಎಂದು ಅವರು ಸ್ಮರಿಸಿದ್ದಾರೆ.

ನಕ್ಸಲರನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು 2026ರ ಮಾರ್ಚ್ 31ರ ಗಡುವು ನಿಗದಿಪಡಿಸಿದ್ದು, ಗಡುವು ಮುಟ್ಟುವ ವಿಶ್ವಾಸದೊಂದಿಗೆ ಹೊಸ ಕಾರ್ಯತಂತ್ರ ರೂಪಿಸುತ್ತಿವೆ. ಈ ಕಾರ್ಯಕ್ಕಾಗಿ 1.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ವಿವಿಧ ರಾಜ್ಯಗಳ ನಕ್ಸಲ್‌ಪೀಡಿತ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

1959ರಲ್ಲಿ ಭಾರತ ಮತ್ತು ಟಿಬೆಟ್ ಗಡಿಯಲ್ಲಿ ಚೀನಿಯರ ದಾಳಿಯಿಂದ ನಮ್ಮ ದೇಶವು ಆಘಾತಕ್ಕೆ ಒಳಗಾಗಿತ್ತು. ಆಗ ನಮ್ಮ ದೇಶದ ಲಡಾಖ್‌ ಪ್ರಾಂತ್ಯದ ಹಾಟ್ ಸ್ಪ್ರಿಂಗ್ ಪ್ರದೇಶದಲ್ಲಿ ಚೀನಿಯರ ದಾಳಿಯಿಂದ ಗಡಿ ರಕ್ಷಣೆಗಾಗಿ ಸಿಆರ್‌ಪಿಎಫ್ ಘಟಕವು ಕಾರ್ಯಾಚರಣೆ ನಡೆಸಿತ್ತು. ಆಗ ಹತ್ತು ಜನ ಯೋಧರು ಹುತಾತ್ಮರಾಗಿದ್ದರು. ಹೀಗೆ ಕರ್ತವ್ಯ ಪಾಲನೆ ಮಾಡುವುದರ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸರ ನೆನಪಿಗಾಗಿ ಪ್ರತಿ ವರ್ಷ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.