
ಬಿಜಾಪುರ (ಛತ್ತೀಸಗಢ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ 21 ಮಹಿಳಾ ನಕ್ಸಲರು ಸೇರಿದಂತೆ 52 ಮಂದಿ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶರಣಾದವರ ಪೈಕಿ 49 ನಕ್ಸಲರ ಸುಳಿವು ನೀಡಿದವರಿಗೆ ಒಟ್ಟು ₹1.41 ಕೋಟಿ ಬಹುಮಾನ ಘೋಷಿಸಲಾಗಿತ್ತು. ಇವರೆಲ್ಲ ದಂಡಕಾರಣ್ಯ ವಿಶೇಷ ವಲಯ ಸಮಿತಿ, ಆಂಧ್ರ– ಒಡಿಶಾ ಗಡಿ ವಿಭಾಗ ಮತ್ತು ಭಮ್ರಾಗಢ ಪ್ರದೇಶ ಸಮಿತಿಯ (ಮಹಾರಾಷ್ಟ್ರ) ಸಕ್ರಿಯ ಸದಸ್ಯರಾಗಿದ್ದರು.
ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತಗೊಂಡ ಇವರು, ಹಿರಿಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಗಳ ಮುಂದೆ ಶರಣಾಗಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ.
ಸರ್ಕಾರದ ಪುನರ್‌ವಸತಿ ನೀತಿಯಡಿ ಶರಣಾದ ನಕ್ಸಲರಿಗೆ ತಲಾ ₹50,000 ಸಹಾಯಧನವನ್ನು ಶೀಘ್ರವೇ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಛತ್ತೀಸಗಢದ ನಿಷೇಧಿತ ಸಿಪಿಐನ (ಮಾವೋವಾದಿ) ಇಬ್ಬರು ಸದಸ್ಯರು ಗುರುವಾರ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತಗೊಂಡ ಇವರು, ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.